ಭುವನೇಶ್ವರ (ಒಡಿಶಾ): ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಒಡಿಶಾದ ಜನಪ್ರಿಯ ನಟ ಪಿಂಟು ನಂದ(47) ಕಳೆದ ರಾತ್ರಿ ಹೈದರಾಬಾದ್ನಲ್ಲಿ ನಿಧನರಾದರು. ಇಲ್ಲಿನ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ತಡರಾತ್ರಿ 11.25 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಯಕೃತ್ ಕಸಿ ಚಿಕಿತ್ಸೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ.
ದೀರ್ಘಕಾಲದಿಂದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಪಿಂಟು ನಂದ ಯಕೃತ್ ವೈಪಲ್ಯಗೊಂಡು ಕಳೆದ ಕೆಲವು ದಿನಗಳಿಂದ ಭುನೇಶ್ವರದ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಯಕೃತ್ ವೈಫಲ್ಯಗೊಂಡ ಕಾರಣ ಮುಂದಿನ ಆರು ತಿಂಗಳೊಳಗೆ ಯಕೃತ್ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಇತ್ತೀಚೆಗೆ ಅವರ ಆರೋಗ್ಯಸ್ಥಿತಿ ಚಿಂತಾಜನಕವಾಗಿತ್ತು. ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಫೆಬ್ರವರಿ 7 ರಂದು ಮೊದಲು ಕಸಿ ಚಿಕಿತ್ಸೆಗಾಗಿ ದೆಹಲಿಗೂ ಕರೆದೊಯ್ಯಲಾಗಿತ್ತು.
ಆದರೆ ದೆಹಲಿಯಲ್ಲಿ ದಾನಿಗಳ ಅಲಭ್ಯತೆಯಿಂದಾಗಿ ಪಿಂಟು ಅವರನ್ನು ಫೆಬ್ರುವರಿ 25ರಂದು ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿತ್ತು. ಕುಟುಂಬದ ಸದಸ್ಯರು ಯಕೃತ್ ದಾನ ಮಾಡಬೇಕಾಗಿತ್ತು. ಆದರೆ ರಕ್ತದ ಗುಂಪಿನ ಹೊಂದಾಣಿಕೆ ಮತ್ತು ಇತರ ಕಾರಣಗಳಿಂದ ಕಾರ್ಯರೂಪಕ್ಕೆ ಬರಲಿಲ್ಲ. ದಾನಿಯನ್ನು ವ್ಯವಸ್ಥೆ ಮಾಡುವ ಮೊದಲೇ ನಂದ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡು, ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ಚಿಕಿತ್ಸೆಗೆ ಸ್ಪಂದಿಸದೆ ನಟ ಕೊನೆಯುಸಿರೆಳೆದಿದ್ದಾರೆ.
ಚಿಕಿತ್ಸೆಗೆ 50 ಲಕ್ಷ ರೂಪಾಯಿ ಬೇಕಾಗಿದ್ದರಿಂದ ಒಡಿಯಾ ಸಿನಿ ಲೋಕದ ಅನೇಕ ಕಲಾವಿದರು ಮತ್ತು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಸಹಾಯ ಹಸ್ತ ಚಾಚಿದ್ದರು. ಇದೀಗ ನಟನ ಅಗಲಿಕೆ ಇಡೀ ಆಲಿವುಡ್ ಲೋಕದಲ್ಲಿ ಶೋಕದ ಛಾಯೆ ಮೂಡಿಸಿದೆ. ಅಭಿಮಾನಿಗಳಲ್ಲಿ ದುಃಖ ಆವರಿಸಿದೆ.
ಪಿಂಟು ನಂದ ಮನೋಜ್ಞ ಅಭಿನಯದಿಂದ ಒಡಿಶಾ ಜನತೆಯ ಮನಗೆದ್ದಿದ್ದರು. ನೆಗೆಟಿವ್ ಪಾತ್ರ ಅಥವಾ ನಾಯಕನ ಪಾತ್ರವೇ ಆಗಿರಲಿ ಉತ್ತಮ ನಟನೆಯ ಮೂಲಕ ಪ್ರೇಕ್ಷಕರನ್ನು ಸದಾ ಹಿಡಿದಿಟ್ಟುಕೊಳ್ಳುತ್ತಿದ್ದರು. 'ಜೈ ಜಗನ್ನಾಥ್', 'ಬಹುದಿಬೇ ಮೋ ಜಗವವಾಲ್ವೆ', 'ಐ ಲವ್ ಮೈ ಇಂಡಿಯಾ', 'ಸಾಥಿರೆ', 'ಪ್ರೇಮ್ ಮೇಕೆ ಮಹಾಭಾರತ', 'ಕಥಾ ದೇದಿ ಮಠ ಹಿಥಿ', 'ಲವ್ ಮಾಸ್ಟರ್', 'ದೋಸ್ತಿ', 'ಹತ್ ಆನಂದ್ ಚನಿತಾ', 'ರಂಗ್ ನೂರ್' ಮತ್ತು 'ಲವ್ ಎಕ್ಸ್‌ಪ್ರೆಸ್' ನಂತಹ ಅನೇಕ ಒಡಿಯಾ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಒಡಿಯಾ ಆಲ್ಬಂ 'ಇ ಗೌರಾ' ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು.
ಇದನ್ನೂ ಓದಿ: ಪುನೀತ್ ಸಿನಿಮಾಗೆ ನಿರ್ದೇಶನ ಮಾಡುವ ಕನಸು ಈಡೇರಲಿಲ್ಲ: ಉಪೇಂದ್ರ