ನಟಿ ನಯನತಾರಾ ಅಭಿನಯದ ಇತ್ತೀಚಿನ ಸಿನಿಮಾ ಅನ್ನಪೂರ್ಣಿ (Annapoorani: The Goddess of Food) 2023ರ ಡಿಸೆಂಬರ್ 1ರಂದು ಬಿಡುಗಡೆಯಾಗಿತ್ತು. ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲೂ ಸಿನಿಮಾ ಲಭ್ಯವಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪ ಈ ಚಿತ್ರದ ಮೇಲಿದೆ. ಭಗವಾನ್ ಶ್ರೀರಾಮನ ಕುರಿತ ಸಂಭಾಷಣೆ ವಿವಾದ ಸೃಷ್ಟಿಸಿದ ಕಾರಣ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಸಿನಿಮಾವನ್ನು ತೆಗೆದುಹಾಕಲಾಯಿತು.
ನಯನತಾರಾ ಕ್ಷಮೆಯಾಚನೆ: ಸಿನಿಮಾದಲ್ಲಿ ಮಾಂಸದ ವಿಚಾರದಲ್ಲಿ ಭಗವಾನ್ ಶ್ರೀ ರಾಮನ ಹೆಸರು ಉಲ್ಲೇಖವಾಗಿದೆ. ಇದು ಅನೇಕರ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿದೆ ಎಂಬ ಆರೋಪಿಸಲಾಗಿದೆ. ಹೀಗಾಗಿ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನೆಟ್‌ಫ್ಲಿಕ್ಸ್‌ನಿಂದ ತೆಗೆದ ನಂತರ, ನಯನತಾರಾ ಕ್ಷಮೆಯಾಚಿಸಿ, ಸುದೀರ್ಘ ಬರಹವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಯನತಾರಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, "ದೇವರು ಆಶೀರ್ವದಿಸಲಿ" (ಕೈ ಮುಗಿಯುವ ಎಮೋಜಿಯೊಂದಿಗೆ) ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಇಂಗ್ಲಿಷ್, ತಮಿಳು ಮತ್ತು ಹಿಂದಿಯಲ್ಲೂ ಹಂಚಿಕೊಳ್ಳಲಾದ ಪೋಸ್ಟ್ನ ಮೇಲ್ಭಾಗದಲ್ಲಿ 'ಜೈ ಶ್ರೀ ರಾಮ್' ಎಂದು ಬರೆಯಲಾಗಿದೆ. ಪೋಸ್ಟ್ ಹೀಗಿದೆ: "ಸಕಾರಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ನಾವು ಅಜಾಗರೂಕತೆಯಿಂದ ನಿಮಗೆ ನೋವು ಮಾಡಿರಬಹುದು. ಈ ಹಿಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾದ ಸಿನಿಮಾವನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗುತ್ತದೆ ಎಂಬುದನ್ನು ನಾವು ನಿರೀಕ್ಷಿಸಿರಲಿಲ್ಲ. ಯಾರ ಭಾವನೆಗಳಿಗೂ ನೋವುಂಟು ಮಾಡುವ ಉದ್ದೇಶವನ್ನು ನಾನಾಗಲಿ ಅಥವಾ ನನ್ನ ತಂಡವಾಗಲಿ ಹೊಂದಿರಲಿಲ್ಲ. ಈ ಸಮಸ್ಯೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾನು ದೇವರನ್ನು ಬಲವಾಗಿ ನಂಬುವ ಮತ್ತು ಆಗಾಗ್ಗೆ ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡುವ ವ್ಯಕ್ತಿಯಾಗಿದ್ದು, ಉದ್ದೇಶಪೂರ್ವಕವಾಗಿ ಮಾಡುವ ಕೊನೆಯ ಕೆಲಸವಿದು. ನಿಮ್ಮ ನಂಬಿಕೆಗಳಿಗೆ ಘಾಸಿ ಮಾಡಿದ್ದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದಿದ್ದಾರೆ.
ಭಗವಾನ್ ರಾಮನ ಬಗ್ಗೆ ಹೇಳಿಕೆ ನೀಡುವ ಮೂಲಕ ಚಿತ್ರದಲ್ಲಿ ಹಿಂದೂ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಶಿವಸೇನೆ ನಾಯಕರೊಬ್ಬರು ಆರೋಪಿಸಿದ್ದರು. ತಮಿಳುನಾಡಿನ ಶ್ರೀರಂಗಂನಲ್ಲಿರುವ ಬ್ರಾಹ್ಮಣ ಕುಟುಂಬದ ಅನ್ನಪೂರ್ಣಿ (ನಯನತಾರಾ) ಕುರಿತಾದ ಚಿತ್ರವಿದು. ಅವಳು ಭಾರತದಲ್ಲಿ ಉತ್ತಮ ಬಾಣಸಿಗಳಾಗಲು (Top Chef) ಬಯಸುತ್ತಾಳೆ. ಅದಾಗ್ಯೂ, ತನ್ನ ಉತ್ಸಾಹ ಮತ್ತು ಸಾಂಪ್ರದಾಯಿಕ ವಿಚಾರಗಳ ನಡುವೆ ಸಿಲುಕಿ ತೊಂದರೆಗಳನ್ನು ಎದುರಿಸುತ್ತಾಳೆ. ಈ ನಡುವೆ ಬರುವ ಸಂಭಾಷಣೆಗಳು ಕೆಲವು ಪ್ರೇಕ್ಷಕರಿಗೆ ಹಿಡಿಸಿರಲಿಲ್ಲ.
ಇದನ್ನೂ ಓದಿ: ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ನಾಳೆಯಿಂದ ಒಟಿಟಿಯಲ್ಲಿ 'ಸಲಾರ್' ಸ್ಟ್ರೀಮಿಂಗ್
ಸಹಪಾಠಿ ಫರ್ಹಾನ್ (ಜೈ) ಸಹಾಯದಿಂದ ಆಕೆ ಕೆಲವು ಇತಿಮಿತಿಗಳನ್ನು ಮೀರಿ ಮುನ್ನುಗ್ಗುತ್ತಾಳೆ ಮತ್ತು ಮಾಂಸ ಸೇವಿಸಲು ಪ್ರಾರಂಭಿಸುತ್ತಾಳೆ. ಫರ್ಹಾನ್ ಆಕೆಯ ಮನವೊಲಿಸಲು ಪ್ರಯತ್ನಿಸುತ್ತಾನೆ. ಭಗವಾನ್ ರಾಮ ಮಾಂಸವನ್ನು ಸೇವಿಸುತ್ತಿದ್ದರು ಮತ್ತು ಮಾಂಸಾಹಾರವನ್ನು ತಿನ್ನುವುದು ಪಾಪವಲ್ಲ ಎಂದಿರುವುದು ಹಲವರ ಅಸಮಧಾನಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: 'ಕಾಟೇರ' ಮೂಲಕ 2024 ಶುಭಾರಂಭ: ಮುಂದಿನ ಕನ್ನಡ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ
ಹಿಂದೂ ಐಟಿ ಸೆಲ್ ಹೆಸರಿನ ಎಕ್ಸ್ ಖಾತೆಯ ಪ್ರಮುಖರಾದ ರಮೇಶ್ ಸೋಲಂಕಿ ಚಿತ್ರದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅವರು ಪೊಲೀಸರಿಗೆ ದೂರು ಸಲ್ಲಿಸಿದ ನಂತರ ಈ ಸಿನಿಮಾವನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಯಿತು. ನಯನತಾರಾ ಮತ್ತು ಜೈ, ಬರಹಗಾರ-ನಿರ್ದೇಶಕ ನೀಲೇಶ್ ಕೃಷ್ಣ, ನಿರ್ಮಾಪಕರಾದ ಜತಿನ್ ಸೇಥಿ, ಆರ್.ರವೀಂದ್ರನ್ ಮತ್ತು ಪುನಿತ್ ಗೋಯೆಂಕಾ, ಜೆಡ್ ಸ್ಟುಡಿಯೋಸ್ನ ಚೀಫ್ ಬ್ಯುಸಿನೆಸ್ ಆಫೀಸರ್ ಶಾರಿಕ್ ಪಟೇಲ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ ಮುಖ್ಯಸ್ಥ ಮೋನಿಕಾ ಶೆರ್ಗಿಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.