ಮಂಗಳೂರು (ದಕ್ಷಿಣ ಕನ್ನಡ): ಈಗಂತೂ ಭಾರತೀಯ ಚಿತ್ರರಂಗದ ದಶದಿಕ್ಕುಗಳಿಂದಲೂ ಕೇಳಿ ಬರುತ್ತಿರುವ ಹೆಸರು ಒಂದೇ, ಅದು ಕಾಂತಾರ. ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಈ ಸಿನಿಮಾ ಇದೀಗ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆಯುತ್ತಿದೆ. ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿಯೂ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಸಿನಿಮಾದ ಪ್ರತೀ ಪಾತ್ರಗಳು ಮನೆ ಮಾತಾಗಿವೆ.
ಮೈ ಮೇಲೆ ದೈವ ಆಹ್ವಾಹನ: ಕಾಂತಾರ ಸಿನಿಮಾದ ಪ್ರತಿ ಪಾತ್ರ ಕೂಡಾ ನೆನಪಿನಲ್ಲಿಟ್ಟುಕೊಳ್ಳುವಂಥದ್ದೇ. ಸಣ್ಣ ಸಣ್ಣ ಪಾತ್ರಗಳನ್ನೂ ಸಹ ಮರೆಯದ ರೀತಿಯಲ್ಲಿ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಇದರಲ್ಲಿ ನಟ ನವೀನ್ ಬೋಂದೆಲ್ ಅವರ ಪಾತ್ರವೂ ಒಂದು. ಈ ಸಿನಿಮಾದ ಆರಂಭದ ಸೀನ್ನಲ್ಲಿ ಹಿಂದಿನ ಕಥೆ ಹೇಳುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ದೈವಾಹ್ವಾನವಾಗುತ್ತದೆ. ಆ ಪಾತ್ರವನ್ನು ನವೀನ್ ಬೋಂದೆಲ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಥೇಟ್ ಮೈ ಮೇಲೆ ದೈವ ಬಂದವರಂತೆ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರ ಅಭಿನಯಕ್ಕೆ ಎಲ್ಲೆಡೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು ಅನುಭವ ಹಂಚಿಕೊಂಡರು.
ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭ: ನವೀನ್ ಬೋಂದೆಲ್ ಅವರು ನಗರದ ಸಿಟಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದವರು. ಇದರೊಂದಿಗೆ ರಂಗಭೂಮಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಕಂಡಕ್ಟರ್ ಕೆಲಸ ಬಿಟ್ಟು ಮಸಾಲಾ ಬ್ಯುಸಿನೆಸ್ ಆರಂಭಿಸಿದ್ದರು. ಕೊರೊನಾ ಸಂದರ್ಭದಲ್ಲಿ ಆ ವ್ಯವಹಾರವೂ ಕೂಡ ಕೈ ಹಿಡಿಯಲಿಲ್ಲ. ಇದೀಗ ಪೂರ್ಣ ಪ್ರಮಾಣದಲ್ಲಿ ರಂಗ ಕಲಾವಿದರಾಗಿ ಕಲಾ ಸೇವೆ ಮಾಡುತ್ತಿದ್ದಾರೆ. ಪ್ರಸ್ತುತ ತುಳುವೆರ್ ತುಡರ್ ಎಂಬ ಕಲಾತಂಡದಲ್ಲಿ ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ.
ದೈವ ದರ್ಶನದ ಪಾತ್ರ: ಇವರಿಗೆ ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಲ್ಲಿ ಪಾತ್ರ ಮಾಡುವ ಕುರಿತ ಮಾಹಿತಿ ಸಿಕ್ಕಿದ್ದು ದೈವ ಪಾತ್ರಿಯೊಬ್ಬರಿಂದ. ಈ ಸಿನಿಮಾದ ಆರಂಭದಲ್ಲಿ ದೈವ ದರ್ಶನದ ಪಾತ್ರ ಬರುತ್ತದೆ. ಈ ಪಾತ್ರಕ್ಕೆ ನವೀನ್ ಬೋಂದೆಲ್ ಅವರನ್ನು ಆಯ್ಕೆ ಮಾಡಲಾಗುತ್ತದೆ.
ಕಾಂತಾರ ಚಿತ್ರೀಕರಣ: ನವೀನ್ ಬೋಂದೆಲ್ ಅವರ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಅವರು ತಮ್ಮ ಕಣ್ಣನ್ನು ಒಮ್ಮೆ ತೆರೆದು ಮುಚ್ಚಿದರಂತೆ. ಕೂಡಲೇ ರಿಷಬ್ ಶೆಟ್ಟಿ ಅವರು ಕಣ್ಣನ್ನು ಪೂರ್ತಿ ತೆರೆದಿಟ್ಟೇ ಪಾತ್ರ ಮಾಡಲು ಸಾಧ್ಯವೇ ಎಂದು ಕೇಳಿದ್ದಾರೆ. ಅದಕ್ಕೆ ನವೀನ್ ಬೋಂದೆಲ್ ಒಪ್ಪಿ ಪ್ರಯತ್ನ ಪಟ್ಟಿದ್ದಾರೆ. ಇದಕ್ಕಾಗಿ ಸಿನಿಮಾ ಶೂಟಿಂಗ್ನಲ್ಲಿ ಬೀಳಿಸುತ್ತಿದ್ದ ಮಳೆ ಹನಿಯನ್ನು ಸ್ವಲ್ಪ ಅಂತರ ಇಟ್ಟು ಮಾಡಲಾಗಿತ್ತು. ನವೀನ್ ಬೋಂದೆಲ್ ಕಣ್ಣು ತೆರೆದಿಟ್ಟು ಮಾಡಿದ ದೈವ ದರ್ಶನ ಪಾತ್ರ ಇದೀಗ ಮೆಚ್ಚುಗೆ ಗಳಿಸಿದೆ.
ಈ ಕಣ್ಣು ದೇವರು ಕೊಟ್ಟ ವರ. ಇದರಿಂದಲೇ ನನಗೆ ಈ ಸಿನಿಮಾದಲ್ಲಿ ಪ್ರಸಿದ್ಧಿ ಸಿಕ್ಕಿದೆ. ಕಾಂತಾರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಮುಂದೆ ನನ್ನ ಕಲಾಜೀವನದಲ್ಲಿ ಇಂತಹ ಅವಕಾಶ ಬರುತ್ತೆ ಅಂತ ಹೇಳಲು ಸಾಧ್ಯವಿಲ್ಲ ಅಂತಾರೆ ನವೀನ್ ಬೋಂದೆಲ್.
ಇದನ್ನೂ ಓದಿ: ಭಾರತದ ಟಾಪ್ 250 ಸಿನಿಮಾಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದ ಕಾಂತಾರ!
ಸಿನಿಮಾದಲ್ಲಿ ನವೀನ್ ಬೋಂದೆಲ್ ಅವರಿಗೆ ಇದ್ದದ್ದು ಕೇವಲ 2 ನಿಮಿಷಗಳ ಅವಕಾಶ. ಆದರೆ ಅಷ್ಟು ಸಣ್ಣ ಅವಧಿಯಲ್ಲಿನ ಅವರ ಪಾತ್ರ ಎಲ್ಲೆ ಮೆಚ್ಚುಗೆ ಗಳಿಸಿದೆ. ಅವರು ಮಾಡಿದ ಅದ್ಭುತ ನಟನೆ, ಅವರ ಖ್ಯಾತಿಯನ್ನು ಹೆಚ್ಚಿಸಿದೆ. ಈ ಸೀನ್ ಅನ್ನು ಸಿನಿಮಾದ ಟ್ರೈಲರ್ನಲ್ಲಿಯೂ ಹಾಕಲಾಗಿತ್ತು ಎಂಬುದು ಮತ್ತೊಂದು ವಿಶೇಷ. ಸಣ್ಣ ಪಾತ್ರದಲ್ಲಿ ಅದ್ಬುತವಾಗಿ ನಟಿಸಿದ ನವೀನ್ ಬೋಂದೆಲ್ ಅವರು ಇಂದು ಬಹಳ ಖ್ಯಾತಿ ಗಳಿಸಿದ್ದಾರೆ. ಹೊಂಬಾಳೆ ಬ್ಯಾನರ್ನಿಂದ ಇನ್ನೊಂದು ಸಿನಿಮಾಗೂ ಅವಕಾಶ ಪಡೆದುಕೊಂಡಿದ್ದಾರೆ.