ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ..' ಎಂಬ ಜನಪ್ರಿಯ ಹಾಡಿನಿಂದಲೇ ಖ್ಯಾತಿ ಗಳಿಸಿದ ರಶ್ಮಿಕಾ, ಇದೀಗ ರಾಷ್ಟ್ರಮಟ್ಟದಲ್ಲಿ ಬಹುಬೇಡಿಕೆಯ ನಟಿ.
ವಿಜಯ ದೇವರಕೊಂಡ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡ್ತಾ ಸಕ್ಸಸ್ ಕಂಡ ನಟಿ ಬಳಿಕ ನಾಗಾರ್ಜುನ ಅಕ್ಕಿನೇನಿ, ನಾಣಿ, ಮಹೇಶ್ ಬಾಬು, ಕಾರ್ತಿ, ಅಲ್ಲು ಅರ್ಜುನ್ ಹೀಗೆ ಸೌತ್ ಸಿನಿಮಾ ರಂಗದ ಸ್ಟಾರ್ ನಟರ ಜೊತೆ ಅಭಿನಯಿಸಿ ದಕ್ಷಿಣ ಭಾರತದಲ್ಲಿ ಟಾಪ್ ನಾಯಕಿಯರಲ್ಲಿ ಒಬ್ಬರು. ಅಲ್ಲು ಅರ್ಜುನ್ ನಾಯಕನಟನಾಗಿ ಅಭಿನಯಿಸಿದ ಪುಷ್ಪ ಚಿತ್ರದ ಯಶಸ್ಸಿನ ನಂತರ ಅವರಿಗೆ ಬೇಡಿಕೆ ಇನ್ನೂ ಹೆಚ್ಚುತ್ತಿದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರರಂಗವನ್ನೂ ಪ್ರವೇಶಿಸಿದ್ದಾರೆ.
ಹೀಗಾಗಿ ರಶ್ಮಿಕಾ ಮಂದಣ್ಣ ಸಂಭಾವನೆ ಕೂಡ ಆಕಾಶದೆತ್ತರಕ್ಕೆ ಏರಿದೆ. ಕಿರಿಕ್ ಪಾರ್ಟಿ ಸಿನಿಮಾಗೆ 5 ರಿಂದ 10 ಲಕ್ಷ ಸಂಭಾವನೆ ಪಡೆದಿದ್ದ ರಶ್ಮಿಕಾ ಮಂದಣ್ಣ ಇವತ್ತಿನ ರೆಮ್ಯೂನರೇಷನ್ ಕೇಳಿ, ದಕ್ಷಿಣ ಭಾರತದ ನಿರ್ಮಾಪಕರು ಶಾಕ್ ಆಗಿದ್ದಾರೆ. ಯಾಕಂದ್ರೆ ಸಿನಿಮಾ ಜೊತೆ ಜೊತೆಗೆ ಅನೇಕ ಜಾಹೀರಾತು ಬ್ರಾಂಡ್ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿಯೂ ಅವರು ಹೊರ ಹೊಮ್ಮುತ್ತಿದ್ದಾರೆ. ಈ ಸ್ಟಾರ್‌ಡಮ್‌ನಿಂದಾಗಿ ರಶ್ಮಿಕಾ ಮಂದಣ್ಣ ಸಂಭಾವನೆ ಜಾಸ್ತಿ ಆಗಿದೆಯಂತೆ.
ಪೂಜಾ ಹೆಗಡೆ ಹಿಂದಿಕ್ಕಿದ ರಶ್ಮಿಕಾ: ಸದ್ಯ ದಕ್ಷಿಣದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಮುಂದಿದ್ದಾರೆ ಎನ್ನಲಾಗುತ್ತಿದೆ. ಈವರೆಗೂ ಪೂಜಾ ಹೆಗಡೆ ಹೆಸರು ಕೇಳಿ ಬರುತ್ತಿತ್ತು. ಇದೀಗ ಪೂಜಾರನ್ನು ಹಿಂದಿಕ್ಕಿ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರುತ್ತಿದೆ.
4 ಕೋಟಿ ರೂ ಸಂಭಾವನೆ: ರಶ್ಮಿಕಾ ಮಂದಣ್ಣ ಆಪ್ತರು ಹೇಳುವ ಪ್ರಕಾರ, ತೆಲುಗು ನಟ ಮಹೇಶ್ ಬಾಬು ಹಾಗು ತಮಿಳಿನ ಕಾರ್ತಿ ಸುಲ್ತಾನ್ ಸಿನಿಮಾಗೆ ಮೂರು ಕೋಟಿ ಸಂಭಾವನೆ ಪಡೆದಿದ್ರಂತೆ. ಈಗ ಪುಷ್ಪ ಸಿನಿಮಾ ಹಿಟ್ ಆದ್ಮೇಲೆ ಕೊಂಚ ಸಂಭಾವನೆ ಜಾಸ್ತಿ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ, ವಿಜಯ್ ಸಿನಿಮಾಗೆ 4 ಕೋಟಿ ರೆಮ್ಯುನರೇಷನ್ ಪಡೆದಿದ್ದಾರೆ ಎನ್ನಲಾಗಿದೆ. ದಕ್ಷಿಣದಲ್ಲಿ ಪೂಜಾ ಹೆಗ್ಡೆ ಒಂದು ಸಿನಿಮಾಗೆ 3.50 ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ.
ಇದನ್ನೂ ಓದಿ: ರಾಮನಗರದಲ್ಲಿ ಶಿವಣ್ಣನ 'ಬೈರಾಗಿ' ತಂಡ; ಚಿತ್ರ ವೀಕ್ಷಿಸಲು ಅಭಿಮಾನಿಗಳಿಗೆ ಮನವಿ