ಭಾರತೀಯ ಚಿತ್ರರಂಗಕ್ಕೆ ಈ ಸಲದ ದಸರಾ ತುಂಬಾ ಸ್ಪೆಷಲ್. ಪ್ರತಿ ವರ್ಷ ವಿಜಯ ದಶಮಿಯಂದು ಕನಿಷ್ಠ ಎರಡರಿಂದ ಮೂರು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಅಲ್ಲದೇ ಹೋದಲ್ಲಿ ಸಣ್ಣಮಟ್ಟದ ಸಿನಿಮಾಗಳು ತೆರೆ ಕಾಣುತ್ತಿದ್ದವು. ಆದರೆ ಈ ಬಾರಿ ಥಿಯೇಟರ್ನಲ್ಲಿ ಸಾಲು ಸಾಲು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ತಯಾರಾಗುತ್ತಿವೆ. ಎಲ್ಲಾ ಭಾಷೆಯ ಸ್ಟಾರ್ ನಟರ ಚಿತ್ರಗಳೇ ಬಿಡುಗಡೆಯಾಗುತ್ತಿವೆ. ಹೀಗಾಗಿ ಥಿಯೇಟರ್ನಲ್ಲಿ ಭಾರಿ ಪೈಪೋಟಿ ಎದುರಾಗಲಿದೆ ಎಂಬುದು ಸಿನಿಮಾ ವಿಶ್ಲೇಷಕರ ಅಭಿಪ್ರಾಯ.
ಈಗಾಗಲೇ ಕನ್ನಡ ಸೇರಿದಂತೆ ಇತರೆ ಭಾಷೆಯ ಸಿನಿಮಾಗಳು ದಸರಾ ಬಾಕ್ಸ್ ಆಫೀಸ್ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ 'ಘೋಸ್ಟ್' (ಕನ್ನಡ), ನಂದಮೂರಿ ಬಾಲಕೃಷ್ಣ 'ಭಗವಂತ ಕೇಸರಿ' (ತೆಲುಗು), ಮಾಸ್ ಮಹಾರಾಜ ರವಿತೇಜ 'ಟೈಗರ್ ನಾಗೇಶ್ವರ ರಾವ್' (ತೆಲುಗು), ದಳಪತಿ ವಿಜಯ್ 'ಲಿಯೋ' (ತಮಿಳು), ಟೈಗರ್ ಶ್ರಾಫ್ 'ಗಣಪಥ್' (ಹಿಂದಿ), ಕಂಗನಾ ರಣಾವತ್ 'ತೇಜಸ್' (ಹಿಂದಿ), 'ಯಾರಿಯನ್ 2', 'ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್' ಚಿತ್ರಗಳು ಒಮ್ಮೆಲೇ ತೆರೆ ಕಾಣಲಿವೆ.
ಇವೆಲ್ಲವೂ ಒಂದೇ ದಿನದ ಗ್ಯಾಪ್ನಲ್ಲಿ ಅಂದರೆ ಅಕ್ಟೋಬರ್ 18 ಅಥವಾ 19ರಂದು ಥಿಯೇಟರ್ಗೆ ಎಂಟ್ರಿಯಾಗಲಿದೆ. ತೆಲುಗು ಮತ್ತು ತೆಲುಗು ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದರೆ ಪ್ರೇಕ್ಷಕರು, 'ಭಗವಂತ ಕೇಸರಿ', 'ಟೈಗರ್ ನಾಗೇಶ್ವರ ರಾವ್' ಮತ್ತು 'ಲಿಯೋ' ಚಿತ್ರದ ಕಡೆಗೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ಟ್ರೇಲರ್ಗಳಿಂದ ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ. ಟಾಲಿವುಡ್ನಲ್ಲಿ ಬಾಲಯ್ಯ ಮತ್ತು ರವಿತೇಜ ನಡುವೆ ಸ್ಪರ್ಧೆ ಏರ್ಪಡಲಿದೆ.
ಇದನ್ನೂ ಓದಿ: ಅ.19ಕ್ಕೆ ಬಹುನಿರೀಕ್ಷಿತ 'ಘೋಸ್ಟ್' ತೆರೆಗೆ: ವಿದೇಶದಲ್ಲಿ 'BIG DADDY' ಹವಾ ಹೇಗಿದೆ ಗೊತ್ತಾ?
ಆದರೆ ಕಾಲಿವುಡ್ನಲ್ಲಿ ವಿಜಯ್ ನಟನೆಯ 'ಲಿಯೋ'ದ್ದೇ ಸದ್ದು. ಕನ್ನಡದಲ್ಲಿ 'ಘೋಸ್ಟ್' ಸಿನಿಮಾದ್ದೇ ಹವಾ. ಬಾಲಿವುಡ್ನಲ್ಲಿ 'ಗಣಪಥ್'ಗೆ ಒಳ್ಳೆ ಕ್ರೇಜ್ ಇದೆ. ಈ ಮೂರು ಸಿನಿಮಾಗಳಿಗೆ ಅವುಗಳದ್ದೇ ಭಾಷೆಯಲ್ಲಿ ಯಾವುದೇ ಪೈಪೋಟಿ ಇಲ್ಲ. ಕಂಗನಾ ರಣಾವತ್ ಅವರ 'ತೇಜಸ್' ಮೇಲೂ ಒಂದಿಷ್ಟು ಕುತೂಹಲ ಇದೆ. ಇನ್ನುಳಿದಂತೆ ಚಿತ್ರಗಳಿಗೆ ಹೆಚ್ಚಿನ ಪ್ರಚಾರ ಇಲ್ಲದಿದ್ದರೂ ಕೆಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.
ಇಷ್ಟೆಲ್ಲಾ ಸ್ಟಾರ್ ನಟರ ಸಿನಿಮಾಗಳು ಹಾಗೂ ಇತರೆ ಕೆಲವು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಥಿಯೇಟರ್ಗಳಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ತಪ್ಪಿಸಲು ಅಕ್ಟೋಬರ್ 13 ಅಥವಾ 15 ಕ್ಕೆ ಯಾವುದಾದರೂ ಎರಡು ಚಿತ್ರಗಳನ್ನು ಪ್ರಿಪೋನ್ ಮಾಡಿದರೆ ಉತ್ತಮ ಎನ್ನುವುದು ವಿಶ್ಲೇಷಕ ಅಭಿಪ್ರಾಯ. ಆದರೆ ಎಲ್ಲಾ ಸ್ಟಾರ್ಗಳು ದಸರಾಗೆ ಎಂಟ್ರಿ ಕೊಡಲು ಬಯಸುತ್ತಿದ್ದಾರೆ. ಹೀಗಾಗಿ ಇನ್ನೂ ಯಾವುದಾದರೂ ಸಿನಿಮಾಗಳು ಇದೇ ಸಾಲಿಗೆ ಸೇರಲಿದೆಯಾ? ಎಂಬುದು ಇನ್ನಷ್ಟೇ ಕಾದುನೋಡಬೇಕಿದೆ. ಅಂತೂ ಈ ದಸರಾ ಸಿನಿ ಪ್ರೇಮಿಗಳಿಗೆ ಹಬ್ಬವೇ ಸರಿ.
ಇದನ್ನೂ ಓದಿ: ಶೈನ್ ಶೆಟ್ಟಿಯ 'ಜಸ್ಟ್ ಮ್ಯಾರಿಡ್'ಗೆ ನಿರ್ಮಾಪಕರಾದ ಅಜನೀಶ್ ಲೋಕನಾಥ್: ಸಿ.ಆರ್ ಬಾಬಿ ನಿರ್ದೇಶನದಲ್ಲಿ ಸಿನಿಮಾ