ಮುಂಬೈ(ಮಹಾರಾಷ್ಟ್ರ): ಮುಂಬೈನ ಅಂಧೇರಿ ಪ್ರದೇಶದ ಹೋಟೆಲ್ವೊಂದರ ಕೋಣೆಯಲ್ಲಿ 30 ವರ್ಷದ ಮಾಡೆಲ್‌ನ ದೇಹವು ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ. ಮೃತದೇಹದ ಬಳಿ ಡೆತ್ ನೋಟ್ ಸಹ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಮಾಡೆಲ್ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೋಟೆಲ್ಗೆ ಬಂದಿದ್ದಾರೆ. ರಾತ್ರಿಯ ಊಟಕ್ಕೂ ಆರ್ಡರ್ ಮಾಡಿದ್ದಾರೆ. ಗುರುವಾರ ಕೆಲಸದವರು ಪದೇ ಪದೆ ಕರೆದಿದ್ದು, ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಹೋಟೆಲ್ ತಲುಪಿದ ಪೊಲೀಸರು ಮಾಸ್ಟರ್ ಕೀಯೊಂದಿಗೆ ಕೊಠಡಿಯನ್ನು ತೆರೆದಿದ್ದು, ಮಾಡೆಲ್ ಶವ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನೂ ವಶಪಡಿಸಿಕೊಂಡಿದ್ದಾರೆ. ಆತ್ಮಹತ್ಯಾ ಪತ್ರದಲ್ಲಿ ಮಾಡೆಲ್, "ನನ್ನನ್ನು ಕ್ಷಮಿಸಿ, ಇದಕ್ಕೆ ಯಾರೂ ಕಾರಣರಲ್ಲ, ನಾನು ಸಂತೋಷವಾಗಿಲ್ಲ, ನನಗೆ ಶಾಂತಿ ಬೇಕು" ಎಂದು ಬರೆದಿದ್ದಾರೆ.
ವರ್ಸೋವಾ ಪೊಲೀಸರು ಎಡಿಆರ್ ಅಡಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮಾಡೆಲ್ ಯಾರು, ಎಲ್ಲಿಯವರು ಸೇರಿದಂತೆ ಮಾಡೆಲ್ ಆತ್ಮಹತ್ಯೆ ಸಂಬಂಧ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ಕಿರಿಕ್.. ದೂರು - ಪ್ರತಿದೂರು ದಾಖಲು!