ಮುಂಬೈ (ಮಹಾರಾಷ್ಟ್ರ): ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್‌ಗೆ ಜೀವ ಬೆದರಿಕೆ ಇದ್ದು ಅವರಿಗೆ ಬಿಗಿ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್ ಅವರು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಉರ್ಫಿ ಜಾವೇದ್ ಚಿತ್ರ-ವಿಚಿತ್ರ ಮತ್ತು ತುಂಡು ಬಟ್ಟೆ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕಿ ಚಿತ್ರಾ ವಾಘ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ವಾಘ್ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ಕೂಡ ದಾಖಲಿಸಿದ್ದರು. ಅದರಂತೆ ಉರ್ಫಿ ಜಾವೇದ್ ಪೊಲೀಸ್ ಠಾಣೆಗೂ ಹಾಜರಾಗಿದ್ದರು. ಇದಾದ ಬಳಿಕ ಉರ್ಫಿ ಜಾವೇದ್ ತನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
ಸದ್ಯ ಈ ದೂರನ್ನು ಆಲಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್ ಅವರು ನಟಿಗೆ ಭದ್ರತೆ ಒದಗಿಸುವಂತೆ ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನನ್ನನ್ನು ಹತ್ತಿಕ್ಕಲು ಬಿಜೆಪಿ ನಾಯಕಿ ಚಿತ್ರಾ ವಾಘ್ ವಿನಾ ಕಾರಣ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಯಾವಾಗ ಬೇಕಾದರೂ ಮಾರಣಾಂತಿಕ ದಾಳಿ ನಡೆಸಬಹುದು ಎಂದು ಉರ್ಫಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟೋಲ್ಗೇಟ್ ಅಪಘಾತ: ಪ್ರಶ್ನಿಸಿದ್ದಕ್ಕೆ ಬೈಕ್ನಲ್ಲಿ ಎಳೆದುಕೊಂಡು ಹೋದ ಸವಾರ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಭದ್ರತೆ ಒದಗಿಸುವಂತೆ ಕೆಲವು ಸೂಚನೆಗಳನ್ನು ನೀಡಿ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸಬೇಕು ಎಂದೂ ಸಹ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಯಾರು ಯಾವುದಾದರೂ ಬಟ್ಟೆ ಧರಿಸಲು ದೇಶದಲ್ಲಿ ಮುಕ್ತ ಅವಕಾಶವಿದೆ. ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೆ ಈ ಸ್ವಾತಂತ್ರವನ್ನು ನೀಡಿದೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈನಂತಹ ಮಹಾನಗರದಲ್ಲಿ ಅಸುರಕ್ಷಿತ ಭಾವನೆ ಕಾಡುತ್ತಿದೆ. ಇದು ಗಂಭೀರ ವಿಷಯ. ಆದ್ದರಿಂದ ಮುಂಬೈ ಪೊಲೀಸ್ ಆಯುಕ್ತರು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ವರದಿಯನ್ನು ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆ ಚಾಕಂಕರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಕಬಡ್ಡಿ ಚಾಂಪಿಯನ್ ಶಿಪ್ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಿದ ಉದಯೋನ್ಮುಖ ಪ್ರತಿಭೆಗಳು: ಹೇಗಿತ್ತು ಗೊತ್ತಾ ಕಬಡ್ಡಿ ಕಾದಾಟ..
ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಉರ್ಫಿ ಜಾವೇದ್ ಅವರ ದೂರನ್ನು ಸ್ವೀಕರಿಸಿದೆ. “ನಾನು ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ. ಅಲ್ಲದೇ ಫ್ಯಾಷನ್ ಉದ್ಯಮದಲ್ಲಿಯೂ ಕೆಲಸ ಮಾಡುತ್ತಿರುವೆ. ವೃತ್ತಿಯಲ್ಲಿ ಹೆಸರು ಮಾಡಲು ಸಾಕಷ್ಟು ಶ್ರಮಪಡುತ್ತಿರುವೆ. ಆದರೆ, ಚಿತ್ರ ಕಿಶೋರ್ ವಾಘ್ ಅವರು ತಮ್ಮ ರಾಜಕೀಯ ಲಾಭ ಮತ್ತು ವೈಯಕ್ತಿಕ ಉದ್ದೇಶಕ್ಕಾಗಿ ನನ್ನನ್ನು ಗುರಿಯಾಗಿಸಿಕೊಂಡು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ.
ಅಲ್ಲದೇ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ನನಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಅಸುರಕ್ಷಿತೆಯ ವಾತಾವರಣ ನಿರ್ಮಾಣವಾಗಿದ್ದು, ಸ್ವಚ್ಛಂದವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು'' ಎಂದು ಅವರು ತಮ್ಮ ದೂರು ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಅದರಂತೆ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಮತ್ತು ತೆಗೆದುಕೊಂಡ ನಿರ್ಧಾರಗಳ ಬಗ್ಗೆಯೂ ಮಾಹಿತಿ ನೀಡುವಂತೆ ಮಹಾ ಮಹಿಳಾ ಆಯೋಗ ಸೂಚನೆ ನೀಡಿದೆ.
ಇದನ್ನೂ ಓದಿ: ನೇಪಾಳ ವಿಮಾನ ಅಪಘಾತ: ಹಬ್ಬಕ್ಕೆ ಮನೆಗೆ ಬರುವೆನೆಂದು ಹೋದ ಮಗಳು ಬರಲೇ ಇಲ್ಲ!
ತರಹೇವಾರು ಮತ್ತು ಮಾದಕ ಬಟ್ಟೆ ಧರಿಸುವ ಮೂಲಕ ಬಿಗ್ ಬಾಸ್ ಮಾಜಿ ಸ್ಪರ್ ಉರ್ಫಿ ಜಾವೇದ್ ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿದವರು. ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮ್ಮ ವಿಭಿನ್ನ ಸ್ಟೈಲಿಶ್ ಫ್ಯಾಷನ್‌ಗಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇವರ ವೇಷಭೂಷಣ ವಿಚಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಾಯಕಿ ಚಿತ್ರಾ ವಾಘ್ ಮುಂಬೈ ಪೊಲೀಸರಲ್ಲಿ ಒತ್ತಾಯಿದ್ದರು.
ಬಳಿಕ ಈ ಬಗ್ಗೆ ದೂರು ಸಹ ನೀಡಿದ್ದರು. ಈ ದೂರಿನ ಆಧಾರ ಪೊಲೀಸರು ಉರ್ಫಿ ಜಾವೇದ್ ಅವರನ್ನು ಕರೆದು ಹೇಳಿಕೆ ದಾಖಲು ಮಾಡಿಕೊಂಡಿದ್ದರು. ಇದಾದ ಬಳಿಕ ಇದೀಗ ಜೀವ ಭಯದ ಬಗ್ಗೆ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಶುಗರ್ ಫ್ಯಾಕ್ಟರಿ ಚಿಮಣಿಯಿಂದ ನಿತ್ಯ ಹೊರಸೂಸುತ್ತಿದೆ ಬೂದಿ: ಎಂಟು ಹಳ್ಳಿಯ ಜನ ಹೈರಾಣು