ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್, ಪೃಥ್ವಿ ರಾಜ್ಕಪೂರ್, ರಜನಿಕಾಂತ್ , ಬಾಲಕೃಷ್ಣ, ವಿ ಅನಂತ್ ನಾಗ್, ರವಿಚಂದ್ರನ್ ಹೀಗೆ ದಿಗ್ಗಜ ನಟರಿಗೆ ಮೇಕಪ್ ಮಾಡಿದ್ದ ಮೇಕಪ್ ಆರ್ಟಿಸ್ಟ್ ಎಂ. ಎಸ್ ಕೇಶವಣ್ಣ ಇಂದು ಸಂಜೆ ನಿಧನರಾಗಿದ್ದಾರೆ.
ಮೈಸೂರಿನಲ್ಲಿ ವಾಸವಾಗಿದ್ದ ಕೇಶವಣ್ಣನಿಗೆ 85 ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಕಳೆದ 53 ವರ್ಷಗಳ ಕಾಲ ಕೇಶವಣ್ಣ ಮೇಕಪ್ ಮ್ಯಾನ್ ಆಗಿ, ಚಿತ್ರರಂಗದ ಕಲಾ ಸೇವೆ ಮಾಡಿದ್ದಾರೆ. ಇನ್ನು ಕೇಶವಣ್ಣನ ತಂದೆ ಸುಬ್ಬಣ್ಣನವರು ಕೂಡ ರಾಜ್‍ಕುಮಾರ್ ಅವರಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದವರು.
ತಂದೆಯ ಬಳಿಕ ಕೇಶವಣ್ಣ 30 ವರ್ಷಗಳ ಕಾಲ ರಾಜ್ ಕುಮಾರ್ ಅವರ ಕಂಪನಿಯಲ್ಲಿ ಮೇಕಪ್ ಕಲಾವಿದರಾಗಿದ್ದರು. ಅಷ್ಟೇ ಅಲ್ಲ ನಿರ್ಮಾಪಕ ವೀರಸ್ವಾಮಿ, ಈಶ್ವರಿ ಪ್ರೊಡಕ್ಷನ್ ನಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದರು.
ಇನ್ನು ಕೇಶವಣ್ಣ ಮೊದಲ ಬಾರಿಗೆ ಮೇಕಪ್ ಮಾಡಿದ್ದು ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರಿಗಂತೆ. ಇದರ ಜೊತೆಗೆ ಪೃಥ್ವಿರಾಜ್ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರಮುನಿ ಹೀಗೆ ತುಂಬಾ ಕಲಾವಿದರಿಗೆ ಕೇಶವಣ್ಣ ಮೇಕಪ್ ಮ್ಯಾನ್ ಕೆಲಸ ಮಾಡಿದ್ದಾರೆ.
ಇನ್ನು ಅನಂತ್ ನಾಗ್ ಅಭಿನಯದ 'ನಾನಿನ್ನ ಬಿಡಲಾರೆ' ಚಿತ್ರದಲ್ಲಿ ಅನಂತ್ ನಾಗ್ ಅವರಿಗೆ ದೆವ್ವದ ಮೇಕಪ್ ಮಾಡಿದ್ದು ಇದೇ ಕೇಶವಣ್ಣ. ಈ ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಆಗಿ ಹಿಂದಿಯಲ್ಲಿ ರೀಮೇಕ್ ಆದಾಗಲೂ ಆ ಚಿತ್ರಕ್ಕೂ ಕೇಶವಣ್ಣನವರು ಮೇಕಪ್ ಮಾಡಿದರಂತೆ. ಇನ್ನು ನಂಜುಂಡಿ ಕಲ್ಯಾಣ ಚಿತ್ರದ ನಿರ್ದೇಶಕ ಎಂ. ಎಸ್ ರಾಜಶೇಖರ್ ಅಚ್ಚುಮೆಚ್ಚಿನ ಮೇಕಪ್ಮ್ಯಾನ್ ಆಗಿದ್ದರಂತೆ ಕೇಶವಣ್ಣ.
ಸಾಕ್ಷಾತ್ಕಾರ, ಹುಲಿಯ ಹಾಲಿನ ಮೇವು, ಮಯೂರ, ಮುರೂವರೆ ವಜ್ರ, ಎಲ್ಲಿದ ಪ್ರೇಮ ಲೋಕ, ಶಾಂತಿ ಕ್ರಾಂತಿ ಸಂಗೊಳ್ಳಿ ರಾಯಣ್ಣ, ಇವರ ಕೊನೆಯ ಚಿತ್ರ ಕುರುಕ್ಷೇತ್ರಕ್ಕೆ ಕೇಶವಣ್ಣ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಕೇಶವಣ್ಣ ಅಂತ್ಯ ಸಂಸ್ಕಾರವನ್ನ ಮೈಸೂರಿನಲ್ಲಿ ನಾಳೆ ಮಾಡಲು ಕುಟುಂಬ ವರ್ಗ ತೀರ್ಮಾನಿಸಿದೆ.