ಪುಣೆ (ಮಹಾರಾಷ್ಟ್ರ): ಕಳೆದ ಒಂದು ತಿಂಗಳ ಹಿಂದೆ ಪುಣೆಯ ಐತಿಹಾಸಿಕ ಲಾಲ್ ಮಹಲ್ನಲ್ಲಿ ಲಾವಣಿ ಡ್ಯಾನ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ತಕಿ ವೈಷ್ಣವಿ ಪಾಟೀಲ್ ಹಾಗೂ ಇತರ ಮೂವರ ವಿರುದ್ಧ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ.
ಪುಣೆಯ ಲಾಲ್ ಮಹಲ್ನಲ್ಲಿ ತಮ್ಮ ಮನರಂಜನಾ ದೃಷ್ಟಿಯಿಂದ ಮಾನ್ಸಿ ಪಾಟೀಲ್, ಕುಲದೀಪ್ ಬಾಪಟ್ ಮತ್ತು ಕೇದಾರ್ ಅವಸಾರೆ ಚಿತ್ರೀಕರಣ ಮಾಡಿದ್ದರು. ನಂತರ ಈ ರೀಲ್‌ಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಪೊಲೀಸರು ಇಂದು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಸಿಗೆ ರಜೆ ಇರುವುದರಿಂದ ಲಾಲ್ ಮಹಲ್ ಅನ್ನು ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮುಚ್ಚಿದೆ.
ಅಲ್ಲದೇ ರಾಜಮಾತಾ ಜೀಜಾವು ಮತ್ತು ಶಿವರಾಯರ ಈ ಕೆಂಪು ಅರಮನೆಯಲ್ಲಿ ರೀಲ್ ಮಾಡುವ ಉದ್ದೇಶದಿಂದಲೇ ಚಿತ್ರವೊಂದರ ಹಾಡಿಗೆ ಕುಣಿದಿದ್ದಾರೆ. ಇದು ರಾಜಮಾತಾ ಜೀಜಾವು ಅವರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಸಂಭಾಜಿ ಬ್ರಿಗೇಡ್ ಸೇರಿದಂತೆ ಇತರ ಪ್ರಗತಿಪರ ಸಂಘಟನೆಗಳು ಇದನ್ನು ಖಂಡಿಸಿದ್ದರು. ಅಲ್ಲದೇ ಈ ನರ್ತಕಿಯರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯ ಮಾಡಿದ್ದರು. ಅದರಂತೆ ಪೊಲೀಸರು ಒಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ವೇಳೆ, ಸಚಿವ ಜಿತೇಂದ್ರ ಅವ್ಹಾದ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪುಣೆಯಲ್ಲಿರುವ ಶಿವಾಜಿ ಮಹಾರಾಜರ ಲಾಲ್ ಮಹಲ್ ನೃತ್ಯ ಮಾಡುವ ಮತ್ತು ಚಿತ್ರೀಕರಣ ಮಾಡುವಂತಹ ಸ್ಥಳವಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದೀಗ ನರ್ತಕಿ ವೈಷ್ಣವಿ ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಅಚಾತುರ್ಯದಿಂದ ನಾನು ತಪ್ಪು ಮಾಡಿದೆ, ಕ್ಷಮಿಸಿ. ಈ ರೀತಿ ಆಗುತ್ತದೆ ಎಂದು ನಾವು ಅಂದು ಕೊಂಡಿರಲಿಲ್ಲ. ನಾನು ಡ್ಯಾನ್ಸರ್ ಆಗಿ ಆ ವಿಡಿಯೋ ಮಾಡಿದ್ದೇನೆ. ಶಿವನ ಆರಾಧಕರಿಗೆ ಮತ್ತು ನಿಮ್ಮೆಲ್ಲರ ಹೃದಯವನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="
">
ನಾನೂ ಕೂಡ ಶಿವನ ಆರಾಧಕಳು. ನನ್ನ ತಪ್ಪು ನನಗೆ ಅರಿವಾಗಿದೆ. ರೆಡ್ ಪ್ಯಾಲೇಸ್ನಲ್ಲಿ ವಿಡಿಯೋ ಮಾಡಿ ತಪ್ಪು ಮಾಡಿದೆ. ಅದು ತಪ್ಪು ಎಂದು ಗೊತ್ತಾದ ತಕ್ಷಣ ನಾನು ಆ ವಿಡಿಯೊವನ್ನು ಅಳಿಸಿ ಸಹ ಹಾಕಿದ್ದೇನೆ.
ಆದರೆ, ಅದನ್ನು ಡಿಲೀಟ್ ಮಾಡುವ ಮುನ್ನವೇ ಆ ವಿಡಿಯೋ ವೈರಲ್ ಆಗಿದ್ದು, ಹಲವೆಡೆ ಶೇರ್ ಆಗಿದೆ. ಈಗಲಾದರೂ ಆ ವಿಡಿಯೋವನ್ನು ಡಿಲೀಟ್ ಮಾಡಿ. ನಾನು ಇನ್ನು ಮುಂದೆ ಆ ತಪ್ಪನ್ನು ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.