ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಚಿಕು ಗೆಳೆಯರಾಗಿ ಗುರುತಿಸಿಕೊಂಡಿದ್ದರು. ಆದರೆ ಕೆಲ ವೈಯಕ್ತಿಕ ಕಾರಣಗಳ ಹಿನ್ನೆಲೆ, ಹಲವು ವರ್ಷಗಳಿಂದ ಇಬ್ಬರ ನಡುವೆ ಅಂತರ ಏರ್ಪಟ್ಟಿದೆ. ಈ ಇಬ್ಬರು ಸ್ಟಾರ್ ನಟರು ಒಂದಾಗಬೇಕು ಎಂಬುದು ಅಭಿಮಾನಿಗಳ ಆಸೆ. ಈ ಮಾತಿಗೆ ಪೂರಕವಾಗಿ, ಕಿಚ್ಚ ಸುದೀಪ್ ತಮ್ಮ ಜನ್ಮ ದಿನದಂದು ನಟ ದರ್ಶನ್ ವಿಚಾರದಲ್ಲಿ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.
ಹೌದು, ಕಿಚ್ಚ ಸುದೀಪ್ ಈ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ, ಅಭಿಮಾನಿಗಳ ಜೊತೆ ಕಾಲ ಕಳೆಯುವ ಮೂಲಕ ತಮ್ಮ 50ನೇ ಬರ್ತ್ ಡೇಯನ್ನು ಸ್ಪೆಷಲ್ ಆಗಿಸಿದ್ದಾರೆ. ಜೆ ಪಿ ನಗರದ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ, ಮಾಧ್ಯಮದವರ ಜೊತೆ ದರ್ಶನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ''ನನಗೆ ದರ್ಶನ್ ಮೇಲೆ ಕೋಪವಿಲ್ಲ'' ಎಂದು ನೇರವಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗೆ ಕನ್ನಡ ಚಿತ್ರರಂಗದ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ 60ನೇ ಜನ್ಮದಿನವನ್ನು ಬಹಳ ಅದ್ಧೂರಿಯಾಗಿ ಆಚರಿಸಿಕೊಂಡರು. ಬರ್ತ್ ಡೇ ಪಾರ್ಟಿ ವೇದಿಕೆ ಮೇಲೆ ದರ್ಶನ್ ಹಾಗೂ ಸುದೀಪ್ ಒಟ್ಟಾಗಿ ಕಾಣಿಸಿಕೊಂಡರು. ಏಳು ವರ್ಷಗಳ ಬಳಿಕ ಇಬ್ಬರೂ ಒಂದೇ ಕಡೆ ಕಾಣಿಸಿಕೊಂಡರು. ಆದ್ರೆ ಅಂದು ಇವರ ಮಧ್ಯೆ ಮಾತುಕತೆ ನಡೆದಿಲ್ಲ. ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ದರ್ಶನ್ ಹಾಗೂ ನಾನು ಒಂದೇ ಪಾರ್ಟಿಯಲ್ಲಿ ಮುಖಾಮುಖಿ ಆದೆವು. ಬಹಳ ವರ್ಷಗಳ ನಂತರ ಅವರನ್ನು ನೋಡಿ ಖುಷಿ ಆಯಿತು. ನಾವು ಕಿತ್ತಾಡಿಕೊಂಡಿಲ್ಲ. ನನಗೆ ದರ್ಶನ್ ಮೇಲೆ ಯಾವುದೇ ಕೋಪವಿಲ್ಲ. ನನ್ನ ಮನಸ್ಸಿನಲ್ಲಿ ಕೆಲ ಪ್ರಶ್ನೆಗಳು ಇವೆ. ಅದೇ ರೀತಿ ದರ್ಶನ್ ಅವರಿಗೂ ಪ್ರಶ್ನೆಗಳು ಇವೆ. ಇಬ್ಬರೂ ಮುಖಾಮುಖಿ ಆದಾಗ, ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗೋದು. ಸುಮಲತಾ ಅವರ ಮೇಲಿನ ಗೌರವದಿಂದ ಆ ಪಾರ್ಟಿಗೆ ಹೋಗಿದ್ದೆ ಎಂದು ಸುದೀಪ್ ತಿಳಿಸಿದರು.
ಇದನ್ನೂ ಓದಿ: Kichcha 46: ಅಭಿನಯ ಚಕ್ರವರ್ತಿಯ ಚಿತ್ರಕ್ಕೆ ಮ್ಯಾಕ್ಸ್ ಶೀರ್ಷಿಕೆ - ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಟೀಸರ್
ಇನ್ನೂ ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ಗಳನ್ನು ನೋಡಲು ಹೋಗುವುದಿಲ್ಲ. ದರ್ಶನ್ ಏನು ಪೋಸ್ಟ್ ಮಾಡಿದ್ದಾರೆ ಎಂಬುದನ್ನು ನಾನು ನೋಡಿಲ್ಲ. ನೇರವಾಗಿ ಏನಾದರೂ ಹೇಳಿದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. ಶೇಕ್ ಹ್ಯಾಂಡ್ ಮಾಡೋದು ದೊಡ್ಡದಲ್ಲ. ಕೆಲವೊಂದಕ್ಕೆ ಸಮಯ ಕೂಡಿ. ಆ ಬಳಿಕ ಸರಿ ಹೋಗುತ್ತದೆ. ನಾವು ಇಬ್ಬರು ಮತ್ತೆ ಒಂದಾದ್ರೆ ನನಗೆ ಖುಷಿಯೇ ಎಂದು ತಿಳಿಸಿದ್ದಾರೆ. ಸುದೀಪ್ ಹೇಳಿಕೆ ಸದ್ಯ ಸ್ಯಾಂಡಲ್ವುಡ್ನಲ್ಲಿ ಪಾಸಿಟಿವ್ ವೈಬ್ಸ್ ಬೀರಿದೆ.
ಇದನ್ನೂ ಓದಿ: ಸುಮಲತಾ ಬರ್ತಡೇ ಪಾರ್ಟಿ: ಒಂದೇ ವೇದಿಕೆಯಲ್ಲಿ ದರ್ಶನ್-ಸುದೀಪ್, ರಾಜಿ ಸಂಧಾನದ ಕುರಿತು ಅಭಿಮಾನಿಗಳ ಕುತೂಹಲ
ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿರುವ ಕಿಚ್ಚ, ನನಗೆ ಎಲ್ಲವೂ ಅಭಿಮಾನಿಗಳೇ. ನಿಮ್ಮಿಂದಲೇ ತಾಳ್ಮೆ ಕಲಿತಿದ್ದೇನೆ. ನಾನು ಹೇಗೆ ಬೇಕಾದ್ರೂ ಇರುತ್ತೇನೆ ಎನ್ನಲು ಆಗುವುದಿಲ್ಲ. ಕಲಾವಿದರಾಗಿ ನಾವು ಎಲ್ಲರನ್ನು ಗೌರವಿಸಬೇಕು. ಅಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆ ಎಂದು ಸ್ಯಾಂಡಲ್ವುಡ್ ಬಾದ್ ಶಾ ತಿಳಿಸಿದರು.