ಪಡ್ಡೆಹುಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ನಟ ಶ್ರೇಯಸ್ ಮಂಜು. ಇದೀಗ ಹೊಸ ಸಿನಿಮಾ ರಾಣ ಮೂಲಕ ಸ್ಯಾಂಡಲ್ವುಡ್ನಲ್ಲಿ ಅಬ್ಬರಿಸಲು ತಯಾರಾಗಿದ್ದಾರೆ. ಟ್ರೈಲರ್ ಹಾಗು ಹಾಡುಗಳಿಂದ ಸದ್ದು ಮಾಡುತ್ತಿದ್ದ ಚಿತ್ರ ಇಂದು ತೆರೆ ಕಾಣುತ್ತಿದೆ.
ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಹಾಗು ನಾಯಕಿ ಸಪ್ತಮಿ ಗೌಡ ಶ್ರೇಯಸ್ ಚಿತ್ರಕ್ಕೆ ಗುಡ್ ಲಕ್ ಹೇಳಿದ್ದಾರೆ. ಸಿನಿಮಾಪ್ರಿಯರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಬೆಂಬಲಿಸಿದ್ದಾರೆ.
ಲವ್ ಸ್ಟೋರಿಯ ಜೊತೆಗೆ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರದ ರಾಣ ಟ್ರೈಲರ್ ನೋಡಿದರೆ ಕಮರ್ಷಿಯಲ್ ಸಿನಿಮಾಗೆ ಬೇಕಾಗುವ ಎಲ್ಲ ಎಲಿಮೆಂಟ್ಸ್ ಸಿಗುತ್ತವೆ. ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿವೆ. ರವಿವರ್ಮ, ಚೇತನ್, ಡಿಸೋಜ ಡಿಫರೆಂಟ್ ಡ್ಯಾನಿ ಹಾಗೂ ಗಣೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ.
ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ಅಲ್ಲದೇ ರಜನಿ ಭಾರದ್ವಾಜ್, ಅಶೋಕ್, ಗಿರಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಕುಮಾರ್, ನಯನ, ರಘು, ಮೋಹನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ಪೊಗರು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಂದಕಿಶೋರ್ ನಿರ್ದೇಶನ ಮಾಡಿದ್ದಾರೆ. ಮೂರು ಹಾಡುಗಳಿದ್ದು, ಚಂದನ್ ಶೆಟ್ಟಿ ಅವರ ಸಂಗೀತವಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಚಿತ್ರಕ್ಕೆ ಸಂಭಾಷಣೆ ಬರೆದವರು ಪ್ರಶಾಂತ್ ರಾಜಪ್ಪ. ವಿಶ್ವ ಅವರ ಕಲಾ ನಿರ್ದೇಶನವಿದೆ. ಕೆ.ಮಂಜು ಅರ್ಪಿಸುವ ಸಿನಿಮಾವನ್ನು ಗುಜ್ಜಲ್ ಟಾಕೀಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಆರಕ್ಷಕರೊಂದಿಗೆ 'ರಾಣ' ಚಿತ್ರತಂಡ.. ಚಿತ್ರದುರ್ಗದಲ್ಲಿ ಸಿನಿಮಾ ಪ್ರಚಾರ ಜೋರು