ಕನ್ನಡ ಚಿತ್ರರಂಗದ ಖ್ಯಾತ ನಟ ಮೋಹನ್ ಜುನೇಜ ಅವರು ನಿಧನರಾಗಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 54 ವರ್ಷದ ಹಾಸ್ಯ ನಟ ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಸಾವನ್ನಪ್ಪಿದ್ದಾರೆ. ನಟನ ಅಗಲಿಕೆಗೆ ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲ್ಲಾಟ ಸಿನಿಮಾ ಮೂಲಕ ಇಂಡಸ್ಟ್ರೀಗೆ ಬಂದ ಮೋಹನ್ ಜುನೇಜ ಧಾರವಾಹಿ ಹಾಗೂ ಸಿನಿಮಾ ಸೇರಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ವಠಾರ ಧಾರವಾಹಿ ಮೂಲಕ ಜನಪ್ರಿಯರಾಗಿದ್ದ ಇವರು ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲೂ ನಟಿಸುವ ಮೂಲಕ ಜನಮನ ಗೆದ್ದಿದ್ದರು. ಜೊತೆಗೆ ಉಪೇಂದ್ರ, ಕಿಚ್ಚ ಅಭಿನಯದ ಕಬ್ಜ ಸಿನಿಮಾದಲ್ಲಿಯೂ ನಟಿಸಿದ್ದರು.
ಇನ್ನುಅನೇಕ ದಿನಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಚಿಕ್ಕಬಾಣಾವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಪತ್ನಿ ಕುಸುಮ, ಇಬ್ಬರು ಮಕ್ಕಳಾದ ಅಶ್ವಿನ್ ಹಾಗೂ ಅಕ್ಷಯ್ ಅವರನ್ನು ಬಿಟ್ಟು ಮೋಹನ್ ಜುನೇಜ ಅಗಲಿದ್ದಾರೆ. ಹೆಸರು ಘಟ್ಟ ರಸ್ತೆಯಲ್ಲಿರುವ ತಮ್ಮೇನಹಳ್ಳಿ ಹತ್ತಿರ ಸಂಜೆ4 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಓದಿ: 'ದಂಗಲ್' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್ 2': ಹಿಂದಿಯಲ್ಲಿ ಹೆಚ್ಚು ಗಳಿಸಿದ 2ನೇ ಚಿತ್ರ ಎಂಬ ಹೆಗ್ಗಳಿಕೆ!