ಮಂಡಿ (ಹಿಮಾಚಲ ಪ್ರದೇಶ): ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಕಂಗನಾ ರಣಾವತ್ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವದಂತಿಗಳು ಇವೆ. ಈ ಬಗ್ಗೆ ಇದೀಗ ಕಂಗನಾ ತಂದೆ ಅಮರ್ದೀಪ್ ರಣಾವತ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಮಗಳು ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಕಂಗನಾ ತಮ್ಮ ರಾಜಕೀಯ ವಲಯದ ಆಕಾಂಕ್ಷೆಗಳ ಬಗ್ಗೆ ಸುಳಿವು ನೀಡಿದ್ದರು. ಶ್ರೀಕೃಷ್ಣನ ಆಶೀರ್ವಾದವಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲಸಗಳನ್ನು ಪ್ರಶಂಸಿಸುವ ಕಂಗನಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ವದಂತಿ ಹರಡಿತ್ತು. ಎರಡು ದಿನಗಳ ಹಿಂದೆ ಕಂಗನಾ ರಣಾವತ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು. ಇದು ಈವರೆಗಿನ ವದಂತಿಗಳಿಗೆ ತುಪ್ಪ ಸುರಿದಂತಿತ್ತು.
ಈ ಎಲ್ಲ ಊಹಾಪೋಹಗಳ ಮಧ್ಯೆ ಕಂಗನಾ ತಂದೆ ಅಮರ್ದೀಪ್ ರಣಾವತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತಮ್ಮ ಮಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಬಿಜೆಪಿ ಪಕ್ಷದಿಂದಲೇ ಕಣಕ್ಕಿಳಿಯಲಿದ್ದಾರೆ. ಆದರೆ, ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದಿನ ವದಂತಿಗಳಂತೆ ನಟಿ, ಚಂಡೀಗಢ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಹಿಂದಿ ಚಿತ್ರರಂಗದ ಅಭಿನೇತ್ರಿ ತಯಾರಿ ನಡೆಸುತ್ತಿದ್ದಾರೆ.
ಕಂಗನಾ ಮುಂದಿನ ಸಿನಿಮಾ: ಕಂಗನಾ ರಣಾವತ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯ ಕೊನೆಯ ಚಿತ್ರ 'ತೇಜಸ್'. ಸಿನಿಮಾ ಮತ್ತು ಅವರ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ ಕಲೆಕ್ಷನ್ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ತೇಜಸ್ ಸಿನಿಮಾಗೂ ಮುನ್ನ ಬಂದ ಚಂದ್ರಮುಖಿ 2 ಕೂಡ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿನ್ನಡೆ ಕಂಡಿತು. ಮುಂದಿನ ದಿನಗಳಲ್ಲಿ 'ಎಮರ್ಜೆನ್ಸಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವನ್ನು ಸ್ವತಃ ನಟಿಯೇ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮ್ ಖೇರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: 'ಋತುಚಕ್ರ ರಜೆ ಅಗತ್ಯವಿಲ್ಲ': ಸ್ಮೃತಿ ಇರಾನಿ ಹೇಳಿಕೆ ಬೆಂಬಲಿಸಿದ ಕಂಗನಾ ರಣಾವತ್