ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ನಿರ್ದೇಶಕ ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರ 2023ರ ಡಿಸೆಂಬರ್ 29ರಂದು ರಾಜ್ಯಾದ್ಯಂತ ತೆರೆಗಪ್ಪಳಿಸಿತು. ಸಿನಿಮಾವನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಹೊಸ ವರ್ಷದಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ನಾಲ್ಕೇ ದಿನಕ್ಕೆ ಬರೋಬ್ಬರಿ 50 ಕೋಟಿ ರೂ. ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ. ಇಂದಿಗೂ ಕಾಟೇರ ಕ್ರೇಜ್ ಹಾಗೇ ಇದೆ.
ಕಾಟೇರ ಗೆದ್ದ ಖುಷಿಯಲ್ಲಿ ಚಿತ್ರತಂಡ ಕನ್ನಡ ಚಿತ್ರರಂಗದ ತಾರೆಯರಿಗಾಗಿ ಬೆಂಗಳೂರಿನ ಮಾಲ್ ಒಂದರಲ್ಲಿ ಸೆಲೆಬ್ರಿಟಿ ಶೋ ಹಮ್ಮಿಕೊಂಡಿತ್ತು. ಈ ಶೋಗೆ ಹಿರಿಯ ನಟಿ ಬಿ. ಸರೋಜಾದೇವಿ, ಶ್ರೀಮುರಳಿ, ಧನಂಜಯ್, ಪ್ರಜ್ವಲ್ ದೇವರಾಜ್, ನೀನಾಸಂ ಸತೀಶ್, ಚಿಕ್ಕಣ್ಣ, ವಿನೋದ್ ಪ್ರಭಾಕರ್ ಸೇರಿದಂತೆ ಸಾಕಷ್ಟು ತಾರೆಯರು ಸಾಕ್ಷಿಯಾಗಿದ್ದರು. ದರ್ಶನ್ ಮುಖ್ಯಭೂಮಿಕೆಯ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡರು.
ಈ ಮಧ್ಯೆ ದರ್ಶನ್ ಖಾಸಗಿ ಪಬ್ ಒಂದರಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಜೊತೆ ನಿರ್ದೇಶಕ ತರುಣ್ ಸುಧೀರ್, ದರ್ಶನ್, ನಟಿ ಶ್ರುತಿ, ವಿ. ಹರಿಕೃಷ್ಣ, ಧನಂಜಯ್, ಪ್ರಜ್ವಲ್ ದೇವರಾಜ್, ನೀನಾಸಂ ಸತೀಶ್ ಈ ಪಾರ್ಟಿಗೆ ಸಾಕ್ಷಿಯಾಗಿದ್ದರು. ದರ್ಶನ್ ತಮ್ಮ ಬಳಗದವರಿಗೆ ದೊಡ್ಡ ಹೂವಿನ ಹಾರ ಹಾಕಿಸುವ ಮೂಲಕ ವಿಭಿನ್ನವಾಗಿ ಸಂಭ್ರಮಾಚರಿಸಿದರು. ದರ್ಶನ್ ಎಲ್ಲರ ಜೊತೆ ಸೇರಿ, ಕೇಕ್ ಕತ್ತರಿಸಿದರು.
ಕಂಪ್ಲೀಟ್ ಮಾಸ್ ಎಂಟರ್ಟೈನ್ಮೆಂಟ್ ಚಿತ್ರವಾಗಿರೋ 'ಕಾಟೇರ' ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು-ಕೀಳು, ಮೇಲ್ಜಾತಿಯವರಿಂದ ಕೆಳ ಜಾತಿಯವರ ಮೇಲೆ ಆಗುತ್ತಿದ್ದ ಅನ್ಯಾಯ ಸೇರಿದಂತೆ ಊಳುವವನೇ ಭೂಮಿಯ ಒಡೆಯ ಕಾಯ್ದೆ ಅಂತಹ ಸೂಕ್ಷ್ಮ ವಿಚಾರಗಳನ್ನು ಈ ಚಿತ್ರ ಒಳಗೊಂಡಿದೆ. ರಾಬರ್ಟ್ ಚಿತ್ರದ ಬಳಿಕ ದರ್ಶನ್ ಹಾಗೂ ತರುಣ್ ಸುಧೀರ್ ಸೇರಿ ಮಾಡಿರುವ ಈ ಸಿನಿಮಾ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ದರ್ಶನ್ ಸಿನಿಜರ್ನಿಯಲ್ಲಿ ನೆನಪಿನಲ್ಲಿ ಉಳಿಯುವ ಚಿತ್ರವಿದು ಅಂತಾರೆ ಸಿನಿಮಾ ವೀಕ್ಷಿಸಿದವರು.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಪ್ರತಾಪ್ ಆರೋಗ್ಯದಲ್ಲಿ ಏರುಪೇರು
ದರ್ಶನ್ ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಅಭಿನಯಿಸಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಬಹಳ ಚೆನ್ನಾಗಿ ನಟಿಸುವ ಮೂಲಕ ಭರವಸೆಯ ನಟಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಜೊತೆಗೆ ತೆಲುಗು ನಟ ಜಗಪತಿ ಬಾಬು, ವಿನೋದ್ ಆಳ್ವಾ, ಅವಿನಾಶ್, ಕುಮಾರ ಗೋವಿಂದ್, ವೈಜನಾಥ್ ಬಿರಾದಾರ್, ಶ್ರುತಿ, ಪದ್ಮಾವಸಂತಿ, ಮಾಸ್ಟರ್ ಲೋಹಿತ್ ತಮ್ಮ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ಚಿತ್ರಕ್ಕೆ ಜಡೇಶ್ ಕಥೆ ಬರೆದಿದ್ದು, ಮಾಸ್ತಿ ಮಂಜು ಸಂಭಾಷಣೆ, ವಿ. ಹರಿಕೃಷ್ಣ ಸಂಗೀತದ ಜೊತೆಗೆ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಕಥೆ ನಮ್ಮ ನೆಲ, ನಮ್ಮ ಸಂಸ್ಕೃತಿಯನ್ನು ಒಳಗೊಂಡಿದೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೀರ್ ಪುತ್ರಿ: ಇರಾ-ನೂಪುರ್ ಮದುವೆ ವಿಡಿಯೋ