ಕಿರುತೆರೆ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ, ಜೂನಿಯರ್ ದರ್ಶನ್ ಎಂದೇ ಪರಿಚಿತರಾಗಿರುವ ಯುವ ಪ್ರತಿಭೆ ಅವಿನಾಶ್ ಇದೀಗ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿದ್ದಾರೆ. ದಂಡತೀರ್ಥ ಸಿನೆಮಾದ ಮೂಲಕ ತೆರೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
ನಿರ್ದೇಶಕ ಹರಿಪ್ರಾಣ ಕಥೆ, ಚಿತ್ರಕಥೆ ಬರೆದು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೈಟಲ್ ಅನ್ನು ಚಿತ್ರತಂಡ ವಿನೂತನವಾಗಿ ಅನಾವರಣ ಮಾಡಿತ್ತು. ಪಝಲ್ ಆಟದಂತೆ ಕಲಾವಿದರು ಎಲ್ಲವನ್ನೂ ಜೋಡಿಸಿದಾಗ ಮೊದಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಮೂಡಿಬಂತು. ನಂತರ ಅದನ್ನು ತಿರುಗಿಸಿದಾಗ ದಂಡತೀರ್ಥ ಶೀರ್ಷಿಕೆ ಅನಾವರಣಗೊಂಡಿತು. ಸುಮಾರು 78 ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹರಿಪ್ರಾಣ ಅವರಿಗಿದೆ. ಇದೀಗ ಪ್ರಾಣ ಪ್ರೊಡಕ್ಷನ್ ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.

ನಿರ್ದೇಶಕ ಹರಿಪ್ರಾಣ ಮಾತನಾಡಿ, ದಂಡ ಎಂದರೆ ಶಿಕ್ಷೆ. ತೀರ್ಥಕ್ಕೆ ಪ್ರಸಾದ ಎನ್ನುವುದುಂಟು. ಆಂಜನೇಯನ ಭಕ್ತನಿಗೆ ಮತ್ತು ಮಾರುತಿಗೆ ಈ ಹೆಸರಿನಿಂದ ಕರೆಯುತ್ತೇವೆ. ಈ ಸಿನೆಮಾದ ಮೊದಲಾರ್ಧ ನೈಜ ಘಟನೆಯನ್ನಾಧರಿಸಿದ್ದು, ಕಾಮಿಡಿಯನ್ನು ಹೊಂದಿದೆ. ಉಳಿದ ಅರ್ಧ ಕಥೆಯು ಕಾಲ್ಪನಿಕವಾಗಿ ಸಾಗುತ್ತದೆ. ಮಾಧ್ಯಮದವರು ಸ್ಟಿಂಗ್ ಆಪರೇಶನ್ ನಡೆಸುವಂತೆ ಸಿನಿಮಾದಲ್ಲೂ ಇದೇ ರೀತಿಯ ಹೋಲಿಕೆ ಇದೆ. ನಾಲ್ಕು ಹಾಸ್ಯ ನಟರಿಗೆ ಗಂಭೀರವಾದ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದರ ಜೊತೆಗೆ ಮುಂದಿನ ದಿನಗಳಲ್ಲಿ ಪ್ರಾಣ ಎಂಬ ಆಡಿಯೋ ಸಂಸ್ಥೆ ಶುರು ಮಾಡಲಾಗುತ್ತಿದೆ. ಪ್ರಾಣ ಎಂಟರ್ಟೈನ್ಮೆಂಟ್ ಮೂಲಕ ರಾಜ್ಯದಾದ್ಯಂತ ಡ್ಯಾನ್ಸರ್, ಗಾಯಕರುಗಳಿಗೆ ವೇದಿಕೆ ಕಲ್ಪಿಸಲು ರಿಯಾಲಿಟಿ ಶೋ ನಡೆಸಲಾಗುವುದು. ಇದರಲ್ಲಿ ಗೆದ್ದ ಮೂವರಿಗೆ ಬಹುಮಾನ ನೀಡಿ, ಚಿತ್ರಗಳಿಗೆ ಇವರುಗಳ ಹೆಸರುಗಳನ್ನು ಶಿಪಾರಸು ಮಾಡಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದರು.
ರಜನಿಕಾಂತ್, ರೇಣುಕಪ್ರಸಾದ್, ಕುರಿಪ್ರತಾಪ್, ಚಂದ್ರಪ್ರಭ, ಜ್ಯೋತಿ, ದೇವು ಸಕಲೇಶಪುರ, ಖಳನಟನಾಗಿ ಪುನೀತ್ ಮತ್ತು ಶರಣ್, ಬೇಬಿ ಶಾನ್ವಿ, ನಾಯಕಿಯರಾಗಿ ಮಾನಸ ಗೌಡ, ಪೂಜರಾಮಚಂದ್ರ ಸೇರಿದಂತೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಜಿ.ರಂಗಸ್ವಾಮಿ ಛಾಯಾಗ್ರಹಣ, ಜಿ.ಪಿ.ಆರಾಧ್ಯ ನೃತ್ಯ ಸಂಯೋಜನೆ, ಲೇಖನ ಅವರ ವಸ್ತ್ರ ವಿನ್ಯಾಸವಿದೆ. ಉಮೇಶ್ ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ವಿಜಯ್ ಕೆಲಸ ಮಾಡಲಿದ್ದಾರೆ. ದಂಡತೀರ್ಥ ಚಿತ್ರತಂಡ ಹೊಸ ವರ್ಷದಿಂದ ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ಮಾಡಲು ಯೋಜನೆ ರೂಪಿಸಿದೆ.
ಇದನ್ನೂ ಓದಿ: ಬಿಡುಗಡೆಗೂ ಮುನ್ನ ಹಲವು ದಾಖಲೆ ಬರೆದ 'ಕಾಟೇರ'