ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಹೊಸ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗೆ ಮುತ್ತಿನ ನಗರಿ ಹೈದರಾಬಾದ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆರ್‌ಆರ್‌ಆರ್ ಖ್ಯಾತಿಯ ನಟ ಜ್ಯೂ.ಎನ್‌ಟಿಆರ್ ಅವರನ್ನು ಹಾಡಿ ಹೊಗಳಿದ್ದಾರೆ.
ಜೂ.ಎನ್‌ಟಿಆರ್ ಜೊತೆ ಕೆಲಸ ಮಾಡಲು ಒಪ್ಪುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, "ಅಂತಹ ಅವಕಾಶವನ್ನು ಯಾರು ತಾನೇ ಕಳೆದುಕೊಳ್ಳುತ್ತಾರೆ ಹೇಳಿ?. ಇದನ್ನು ನಾನು ಅನೇಕ ಸಲ ಹೇಳಿದ್ದೇನೆ. ನನಗೆ ಅವರ ಅಭಿನಯ ಎಂದರೆ ಅಚ್ಚುಮೆಚ್ಚು. ಅಷ್ಟೇ ಅಲ್ಲ ಅವರೊಬ್ಬ ಲೆಜೆಂಡ್(ದಂತಕಥೆ). ಜೂ.ಎನ್‌ಟಿಆರ್ ಜತೆ ಅಭಿನಯಿಸಲು ನಾನು ಕಾಯುತ್ತಿದ್ದೇನೆ" ಎಂದು ಖುಷಿ ಹಂಚಿಕೊಂಡರು. ಜಾನ್ವಿ ಅವರ ಇಂಥದ್ದೊಂದು ಪ್ರತಿಕ್ರಿಯೆ ಇಬ್ಬರ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ.
ಜಾನ್ವಿ ಬಾಲಿವುಡ್ ನಟಿ ಶ್ರೀದೇವಿಯವರ ಮಗಳು. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರ ಮುಖ್ಯಭೂಮಿಕೆಯ ಹೊಸ ಸಿನಿಮಾ 'ಮಿಲಿ' ಇದೇ ಶುಕ್ರವಾರ ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಇವರದ್ದೇ ಅಭಿನಯದ ಜನಗಣಮನ ಮುಂದಿನ ವರ್ಷ ತೆರೆ ಕಾಣಲಿದೆ. ಈ ನಡುವೆ ಸೂಪರ್‌ಹಿಟ್ ಆರ್‌ಆರ್‌ಆರ್ ಸಿನಿಮಾದಲ್ಲಿ ಧೂಳೆಬ್ಬಿಸಿದ್ದ ಜ್ಯೂ.ಎನ್‌ಟಿಆರ್ ಜೊತೆ ಅಭಿನಯಿಸುವ ಬಗ್ಗೆ ಜಾನ್ವಿ ಮನದಿಚ್ಚೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ನೀವು ತೆಲುಗು ಚಿತ್ರಗಳಿಂದ ಹಿಂದೆ ಸರಿಯಲು ಕಾರಣವೇನು? ಎಂಬ ಪ್ರಶ್ನೆ ತೂರಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಲು ಮಾತ್ರ ಅವರು ನಯವಾಗಿಯೇ ನಿರಾಕರಿಸಿದ್ದಾರೆ. ಅದೇನೇ ಇದ್ದರೂ ಜ್ಯೂ.ಎನ್‌ಟಿಆರ್ ಜೊತೆ ಯಾವ ಸಿನಿಮಾದಲ್ಲಿ ಜಾನ್ವಿ ನಾಯಕಿಯಾಗುತ್ತಾರೆ ಎಂಬುದು ಅಭಿಮಾನಿಗಳ ಕುತೂಹಲ.
ಇದನ್ನೂ ಓದಿ: ಕಿಂಗ್ ಆಫ್ ರೊಮ್ಯಾನ್ಸ್ ಶಾರುಖ್ ಖಾನ್ ಹುಟ್ಟುಹಬ್ಬ: ಪಠಾಣ್ ಟೀಸರ್ ಬಿಡುಗಡೆ