ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಿನ್ನೆ (ಸೆಪ್ಟೆಂಬರ್ 21) 43ನೇ ಜನ್ಮದಿನ ಆಚರಿಸಿಕೊಂಡರು. 'ಬಾಲಿವುಡ್ ಬೇಬೋ' ಜನ್ಮದಿನದಂದೇ ಬಹುನಿರೀಕ್ಷಿತ 'ಜಾನೆ ಜಾನ್' ಸಿನಿಮಾ ಬಿಡುಗಡೆ ಆಗಿದೆ. ಸುಮಾರು 68 ಸಿನಿಮಾಗಳಲ್ಲಿ ನಟಿಸಿರುವ ಕರೀನಾ ಕಪೂರ್ ಖಾನ್ ಇದೇ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಲಭ್ಯವಿದ್ದು, ಪ್ರೇಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸುಜೋಯ್ ಘೋಷ್ ಆ್ಯಕ್ಷನ್ ಕಟ್ ಹೇಳಿರುವ ಜಾನೆ ಜಾನ್‌ನಲ್ಲಿ ಕರೀನಾ ಜೊತೆಗೆ ಪ್ರತಿಭಾನ್ವಿತ ನಟರಾದ ವಿಜಯ್ ವರ್ಮಾ, ಜೈದೀಪ್ ಅಹ್ಲಾವತ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ವಿಜಯ್ ಮತ್ತು ಜೈದೀಪ್ ಅವರು ಕರೀನಾ ಅವರೊಂದಿಗೆ ಕೆಲಸ ಮಾಡಿದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಚಿತ್ರೀಕರಣದ ವೇಳೆ ಅವರೆಷ್ಟು ಉತ್ಸಾಹ, ಆಸಕ್ತಿ ಹೊಂದಿದ್ದರು ಎಂಬುದನ್ನು ಬಹಿರಂಗಪಡಿಸಿದ್ದರು.
ಕೊನೆಯದಾಗಿ ಲಸ್ಟ್ ಸ್ಟೋರಿ 2 ಚಿತ್ರದಲ್ಲಿ ಕಾಣಿಸಿಕೊಂಡ ವಿಜಯ್ ವರ್ಮಾ ಅವರು ಕರೀನಾ ಕುರಿತು ಮಾತನಾಡುತ್ತಾ, ''ಅವರು ತಮ್ಮ ನಡವಳಿಕೆ ಮತ್ತು ಕಣ್ಣಲ್ಲೇ ಇಡೀ ವಾತಾವರಣ ಬೆಳಗಿಸುವ ಸಾಮರ್ಥ್ಯ ಹೊಂದಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಜಾನೆ ಜಾನ್ ಸಿನಿಮಾದಲ್ಲಿ ನರೇನ್ ವ್ಯಾಸ್ ಪಾತ್ರ ನಿರ್ವಹಿಸಿರುವ ಜೈದೀಪ್ ಅಹ್ಲಾವತ್ ಮಾತನಾಡಿ, ಕರೀನಾ ತಮ್ಮ ಪಾತ್ರಕ್ಕೆ ಸೆಟ್‌ನಲ್ಲಿ ತಯಾರಾಗುವುದನ್ನು ನಾವು ನೋಡಲಿಲ್ಲ ಎಂದು ತಿಳಿಸಿದರು. ಜಬ್ ವಿ ಮೆಟ್ ನಟಿ 20 ವರ್ಷಗಳಿಗೂ ಹೆಚ್ಚು ಸಮಯದಿಂದ ಗುರುತಿಸಿಕೊಂಡಿದ್ದು, ಅದ್ಭುತ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ಜೈದೀಪ್ ಪ್ರಶಂಸಿಸಿದರು.
ಇದನ್ನೂ ಓದಿ: ಪುತ್ರನೊಂದಿಗೆ ಮುಂಬೈ 'ಲಾಲ್ಬೌಚ ರಾಜಾ' ಗಣಪತಿ ದರ್ಶನ ಪಡೆದ ಶಾರುಖ್ ಖಾನ್- ವಿಡಿಯೋ
ಜಾನೆ ಜಾನ್ ಸಿನಿಮಾವನ್ನು ಕರೀನಾ ಕಪೂರ್ ಖಾನ್ ಅವರ ಹುಟ್ಟುಹಬ್ಬದ ಸಲುವಾಗಿ ನಿನ್ನೆ, ಸೆಪ್ಟೆಂಬರ್ 21ರಂದು ಬಿಡುಗಡೆ ಮಾಡಲಾಯಿತು. ಕರೀನಾ, ವಿಜಯ್, ಮತ್ತು ಜೈದೀಪ್ ಅಲ್ಲದೇ ಒಟಿಟಿಯಲ್ಲಿ ತೆರೆಕಂಡಿರುವ ಚಿತ್ರದಲ್ಲಿ ನೈಶಾ ಖನ್ನಾ ಕಾಗೂ ಕರ್ಮ ಟಕಪಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ತಲುಪಿದ ರಾಗ್ನೀತಿ: ದೆಹಲಿ ಏರ್ಪೋರ್ಟ್ನಲ್ಲಿ ಲವ್ಬರ್ಡ್ಸ್ ಕಾಣಿಸಿಕೊಂಡಿದ್ದು ಹೀಗೆ- ವಿಡಿಯೋ
ಕರೀನಾ ಕಪೂರ್ ಖಾನ್ ಅವರ ಮುಂದಿನ ಸಿನಿಮಾ 'ದಿ ಕ್ರ್ಯೂ'. ಕೃತಿ ಸನೋನ್ ಮತ್ತು ಟಬು ಜೊತೆ ನಟಿಸುತ್ತಿದ್ದಾರೆ. ವೈಮಾನಿಕ ಕ್ಷೇತ್ರದ ಕಥೆಯನ್ನು ಆಧರಿಸಿರುವ ಸಿನಿಮಾವನ್ನು ಇದೇ ಸಾಲಿನಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಯುತ್ತಿದೆ. ಮೂವರು ಬಹುಬೇಡಿಕೆ ನಟಿಯರನ್ನೊಳಗೊಂಡ ಸಿನಿಮಾ ಮೇಲೆ ಪ್ರೇಕ್ಷಕರ ಕುತೂಹಲ ಬಹಳಷ್ಟಿದೆ. ಚಿತ್ರತಂಡ ವಿಡುಗಡೆ ದಿನಾಂಕವನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.