ಸ್ಯಾಂಡಲ್ವುಡ್ನಲ್ಲಿ ಲವ್ ಮಾಕ್ಟೇಲ್ ನಂತರ ನಟಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ವಿಭಿನ್ನ ಪ್ರೇಮಕಥಾಹಂದರದ ಜೊತೆಗೆ ವಾಮಾಚಾರ, ಹಾರರ್ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಚಿತ್ರ 'ಓ'. ಮಹೇಶ್ ಸಿ. ಅಮ್ಮಲ್ಲಿದೊಡ್ಡಿ ಅವರ ಚಿತ್ರಕಥೆ ಹಾಗು ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದೆ.
- " class="align-text-top noRightClick twitterSection" data="">
ಈ ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ಮಹೇಶ್ ಈವರೆಗೆ ನಾನೇನು ಹಾರರ್ ಸಿನಿಮಾಗಳನ್ನು ನೋಡಿದ್ದೇನೋ, ಅದೆಲ್ಲಕ್ಕಿಂತ ವಿಭಿನ್ನವಾಗಿರಬೇಕು ಎಂದು ಮಾಡಿದ ಚಿತ್ರವಿದು. ಒಂದು ಕುಟುಂಬದಲ್ಲಿ ಅಕ್ಕತಂಗಿಯ ಮೇಲೆ ನಡೆಯುವ ಕಥೆಯಿದು. ಓ ಎಂಬ ಪದಕ್ಕೆ ಅರ್ಥವನ್ನು ಚಿತ್ರದಲ್ಲಿ ಹೇಳಿದ್ದೇವೆ. ಅಲ್ಲದೇ ವಾಮಾಚಾರ ಮಾಡುವುದು ತಪ್ಪು ಅಂತಲೇ ತೋರಿಸಿದ್ದೇವೆ ಅಂದರು.
ನಂತರ ನಿರ್ಮಾಪಕ ಕಿರಣ್ ತಲಕಾಡು ಮಾತನಾಡಿ, ನನಗೆ ಚಿಕ್ಕವನಿದ್ದಾಗಲೇ ಏಕಾಕ್ಷರ ಶೀರ್ಷಿಕೆಯಿಟ್ಟುಕೊಂಡು ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಸೆನ್ಸಾರ್ ಮಂಡಳಿಯವರು ಸಿನಿಮಾ ನೋಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿದರು. ನಮ್ಮ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಒಂದು ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಿಡುಗಡೆಯನ್ನು ದೊಡ್ಡ ಇವೆಂಟ್ ಮೂಲಕ ಮಾಡಬೇಕೆಂಬ ಯೋಚನೆಯಿದೆ. ಆಡಿಯೋ ಬಿಡುಗಡೆಗೆ ನಾನು ಬರುತ್ತೇನೆಂದು ಪುನೀತ್ ಅವರು ಹೇಳಿದ್ದರು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಬಳಿಕ ನಟಿ ಮಿಲನಾ ನಾಗರಾಜ್ ಮಾತನಾಡಿ, ಲಾಕ್‌ಡೌನ್‌ಗೂ ಮುನ್ನವೇ ಈ ಸಿನಿಮಾ ಪ್ರಾರಂಭವಾಗಿತ್ತು. ಬೇರೆಯದೇ ರೀತಿಯ ಅನುಭವ ಕೊಡುವಂಥ ಚಿತ್ರವಿದು. ಈ ಥರದ ಚಿತ್ರಗಳನ್ನು ಮಾಡುವಾಗ ತುಂಬಾ ಸಹನೆ ಇರಬೇಕು. ಅದು ಈ ನಿರ್ದೇಶಕರಲ್ಲಿತ್ತು. ಅಮೃತ ನನ್ನ ಸಹೋದರಿ ಪಾತ್ರ ಮಾಡಿದ್ದಾರೆ. ಸಿದ್ದು ಕೂಡ ಒಂದೊಳ್ಳೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದರಲ್ಲಿ ಬ್ಲ್ಯಾಕ್ ಮ್ಯಾಜಿಕ್, ಹಾರರ್ ಹೀಗೆ ತುಂಬಾ ವಿಷಯಗಳಿವೆ. ಇದನ್ನು ನಾರ್ಮಲ್ ಸಿನಿಮಾ ರೀತಿ ಶೂಟ್ ಮಾಡಲು ಸಾಧ್ಯವಿಲ್ಲ. ಬೇರೆ ಥರದ ಶಾಟ್ ಇಡಬೇಕು ಎಂದು ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು.
ನಂತರ ಅಮೃತ ಅಯ್ಯಂಗಾರ್ ಮಾತನಾಡಿ, ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನದು ಎಲ್ಲ ರೀತಿಯ ಎಮೋಷನ್ ಕ್ಯಾರಿ ಮಾಡುವಂತಹ ಪಾತ್ರ. ಜನರಿಗೆ ಹೆದರಿಸೋದು ತುಂಬಾ ಕಷ್ಟದ ಕೆಲಸ. ಕೆಲವು ಸೀನ್‌ಗಲ್ಲಿ ಆ್ಯಕ್ಟ್ ಮಾಡುವಾಗ ತುಂಬಾ ಭಯವಾಗಿತ್ತು. ಆಲಾಪ್ ನನ್ನ ತಮ್ಮನ ಪಾತ್ರ ಮಾಡಿದ್ದಾರೆ. ಅವರ ಜೊತೆ ನನ್ನ ಹೆಚ್ಚು ಸೀನ್‌ಗಳಿವೆ ಎಂದರು.
ನಾಯಕ ಸಿದ್ದು ಮೂಲಿಮನಿ ಮಾತನಾಡಿ, ನಾನು ಅಭಿನಯಿಸಿದ ಮೊದಲ ಚಿತ್ರವಿದು. ಆಗ ನಾನು ಬೇರೊಂದು ಸಿನಿಮಾಗೆ ಆಡಿಷನ್ ಕೊಟ್ಟಿದ್ದೆ. ಸ್ನೇಹಿತ ಮಹೇಶ್ ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಅದರಲ್ಲಿ ನೀನೇ ಹೀರೋ ಅಂದಿದ್ದರು. ಹೇಳಿದ ಹಾಗೇ ಕರೆದು ಹೀರೋ ಮಾಡಿದ್ದಾರೆ ಎಂದು ಹೇಳಿಕೊಂಡರು.
ನಾಯಕಿಯರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟಿ ಸಂಗೀತಾ ಮಾತನಾಡಿ, ನಿರ್ಮಾಪಕ ಕಿರಣ್ ನನಗೆ ಫ್ಯಾಮಿಲಿ ಫ್ರೆಂಡ್. ಅವರಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿಯಿದೆ. ಇನ್ನೂ ಒಳ್ಳೊಳ್ಳೇ ಚಿತ್ರಗಳನ್ನು ಮಾಡುವಂತಾಗಲಿ, ನಾನು ಈ ಚಿತ್ರದಲ್ಲಿ ಮಾ.ಆಲಾಪ್, ಅಮೃತಾ ಹಾಗೂ ಮಿಲನಾರ ತಾಯಿಯಾಗಿ ನಟಿಸಿದ್ದೇನೆ ಎಂದರು.
ಇದನ್ನೂ ಓದಿ: ಹೊಂಬಾಳೆ ಫಿಲ್ಸ್ಮ್ ಜೊತೆ ವಿಕ್ರಾಂತ್ ರೋಣನ ಹೊಸ ಸಿನಿಮಾ: ಕುತೂಹಲ ಹೆಚ್ಚಿಸಿದ ಒಂದು ಫೋಟೋ
ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದಿಲೀಪ್ ಚಕ್ರವರ್ತಿ ಕೆಲಸ ಮಾಡಿದ್ದಾರೆ. ಕಿರಣ್ ರವೀಂದ್ರನಾಥ್ ಅವರ ಸಂಗೀತ, ಸತೀಶ್ ಬಾಬು ಅವರ ಹಿನ್ನೆಲೆಸಂಗೀತ ಈ ಚಿತ್ರಕ್ಕಿದೆ. ಉಗ್ರಂ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಕಿರಣ್ ತಲಕಾಡು ಅವರು ಕಥೆ ಬರೆದು ಏಕಾಕ್ಷರ ಫಿಲಂಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನವೆಂಬರ್ 11ಕ್ಕೆ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.