ಬಿಗ್ ಬಜೆಟ್ ಸಿನಿಮಾಗಳ ಮಧ್ಯೆ ವೆಬ್ ಸಿರೀಸ್ಗಳು ವಿಶ್ವಾದ್ಯಂತ ಸಖತ್ ಸದ್ದು ಮಾಡುತ್ತಿವೆ. ಓಟಿಟಿಯಲ್ಲಿ ಬರುವ ಥ್ರಿಲ್ಲರ್, ರಿಯಲ್ ಇನ್ಸಿಡೆಂಟ್ಗಳ ಕಥೆಯ ಮೇಲೆ ವೆಬ್ ಸೀರಿಸ್ಗಳು ನಿರ್ಮಾಣವಾಗಿ ಸಿನಿಮಾ ಪ್ರಿಯರನ್ನು ಆಕರ್ಷಿಸುತ್ತಿವೆ. ಈ ಸಾಲಿಗೀಗ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಪುತ್ರಿ ನಿವೇದಿತಾ ಸೇರಿದ್ದಾರೆ.
ವೂಟ್ ಸೆಲೆಕ್ಟ್ನಲ್ಲಿ ಹನಿಮೂನ್ ವೆಬ್ ಸಿರೀಸ್ ಪ್ರಸಾರವಾಗಲಿದೆ. ಗುರುವಾರದಂದು ಹನಿಮೂನ್ ಟ್ರೈಲರ್ ಬಿಡುಗಡೆ ಮಾಡಲಾಯಿತು. ಈ ವೇಳೆ ನಿರ್ಮಾಪಕಿ ನಿವೇದಿತಾ ಶಿವರಾಜ್ಕುಮಾರ್, ನಟ ನಾಗಭೂಷಣ್, ನಟಿ ಸಂಜನಾ ಆನಂದ್ ಹಾಗೂ ನಟ ಶಿವರಾಜ್ ಕುಮಾರ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ಕನ್ನಡ ಕಲರ್ಸ್ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ಉಪಸ್ಥಿತರಿದ್ದರು.
ನಿವೇದಿತಾ ಮಾತನಾಡಿ, ನಾನು ಹೆಚ್ಚಾಗಿ ಹಾಲಿವುಡ್ ಶೈಲಿಯ ವೆಬ್ ಸೀರಿಸ್ಗಳನ್ನು ನೋಡುತ್ತಿದ್ದೆ. ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಮಾಡಬಹುದು ಅಂದುಕೊಂಡೆ. ನಾನು ಮೊದಲಿಗೆ ವೆಬ್ ಸೀರಿಸ್ ಮಾಡುತ್ತೇನೆಂದಾಗ ನನ್ನ ಅಪ್ಪ ಅಮ್ಮ ಬೇಡ ಎಂದು ಹೇಳಿಲ್ಲ. ನನ್ನ ಕೆಲಸಕ್ಕೆ ಸಾಥ್ ನೀಡಿದರೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಶಿವರಾಜ್ ಕುಮಾರ್ ಮಾತನಾಡಿ, ನನಗೆ ವೆಬ್ ಸೀರಿಸ್ ಬಗ್ಗೆ ಗೊತ್ತಿರಲಿಲ್ಲ. ನನಗೆ ಸಿನಿಮಾ ಸಿನಿಮಾ ಅನ್ನೋದು ಬಿಟ್ಟರೆ, ಬೇರೆ ಯೋಚನೆ ಇರಲಿಲ್ಲ. ಆಗ ನನ್ನ ಮಗಳು ಬೇರೆ ಭಾಷೆಯ ವೆಬ್ ಸಿರೀಸ್ಗಳನ್ನು ನೋಡಿ ಅಂತಾ ಹೇಳಿದಳು. ಆಗ ನನಗೆ ವೆಬ್ ಸೀರಿಸ್ ಬಗ್ಗೆ ಆಸಕ್ತಿ ಮೂಡಿತ್ತು. ಬಳಿಕ ನನ್ನ ಮಗಳು ನಾನು ವೆಬ್ ಸಿರೀಸ್ ನಿರ್ಮಾಣ ಮಾಡುತ್ತೇನೆ ಅಂದಾಗ ನಾನು ಪ್ರಶ್ನೆ ಮಾಡಲಿಲ್ಲ. ಯಂಗ್ ಜನರೇಷನ್ನಿಂದ ಕಲಿಯೋದು ಬಹಳ ಇದೆ ಎಂದರು.
ನಟ ನಾಗಭೂಷಣ್ ಹನಿಮೂನ್ ವೆಬ್ ಸೀರಿಸ್ನಲ್ಲಿ ಮುಖ್ಯಪಾತ್ರ ಮಾಡುವುದರ ಜೊತೆಗೆ ಕಥೆ ಬರೆದಿದ್ದಾರೆ. ನಾಗಭೂಷಣ್ಗೆ ಜೋಡಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಜೊತೆಗೆ ನಿರ್ದೇಶಕ ಲೂಸಿಯಾ ಪವನ್ ಕೂಡ ಪಾತ್ರ ನಿರ್ವಹಿಸಿದ್ದಾರೆ. ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟ್ಟಿಗೆ ಕೂಡ ಹನಿಮೂನ್ನಲ್ಲಿದ್ದಾರೆ.
ಆರು ಕಂತುಗಳ ಹನಿಮೂನ್ ವೆಬ್ ಸಿರೀಸ್ ಅನ್ನು ಖ್ಯಾತ ನಟ ಶಿವರಾಜ್ ಕುಮಾರ್ ಅರ್ಪಿಸುತ್ತಿದ್ದಾರೆ. ಸಖತ್ ಸ್ಟುಡಿಯೋ ಕ್ರಿಯೇಟಿವ್ ಟೀಮ್ ಈ ಹನಿಮೂನ್ ವೆಬ್ ಸಿರೀಸನ್ನು ನಿರ್ದೇಶನ ಮಾಡಿದೆ. ಶ್ರೀಶಾ ಕುದುವಳ್ಳಿ ಹಾಗು ರಾಹುಲ್ ರಾಯ್ ಕ್ಯಾಮರಾ ವರ್ಕ್ ಮಾಡಿದ್ದು, ವಾಸುಕಿ ವೈಭವ್ ಈ ಸಿರೀಸ್ಗೆ ಸಂಗೀತ ನೀಡಿದ್ದಾರೆ. ನಿವೇದಿತಾ ಶಿವರಾಜ್ ಕುಮಾರ್ ಹಾಗೂ ಸಖತ್ ಸ್ಟುಡಿಯೋ ನಿರ್ಮಾಣ ಮಾಡಿದೆ. ಇದೇ ಮೇ 20ರಿಂದ ವೂಟ್ ಸೆಲೆಕ್ಟ್ನಲ್ಲಿ ಈ ಹಾಸ್ಯಪ್ರಧಾನ ಪ್ರೇಮಕತೆಯನ್ನು ನೋಡಿ ಆನಂದಿಸಬಹುದು.
ಇದನ್ನೂ ಓದಿ: ಬಾಲಿವುಡ್ 'ಬೇಬಿ ಡಾಲ್'ಗೆ 41ನೇ ಜನ್ಮದಿನ ಸಂಭ್ರಮ: ಶುಭಾಶಯಗಳ ಮಹಾಪೂರ
ಇದು ಎಲ್ಲ ಅರೇಂಜ್ಡ್ ಮ್ಯಾರೇಜ್ಗಳ ಕತೆ. ಹೊಸದಾಗಿ ಮದುವೆಯಾದವರು ಇದರಲ್ಲಿ ತಮ್ಮನ್ನು ತಾವು ಕಾಣಬಹುದಾಗಿದೆ. ಗಂಡು ಹೆಣ್ಣು ತಮ್ಮ ಹೊಸ ಬದುಕನ್ನು ಜೋಡಿಸಿಕೊಳ್ಳುವುದು ಹನಿಮೂನ್ನಲ್ಲೇ. ಒಂದಷ್ಟು ಕುತೂಹಲ, ಒಂದಷ್ಟು ಪಜೀತಿ, ಒಂದಷ್ಟು ಗುಟ್ಟುಗಳು, ಒಂದಷ್ಟು ಒದ್ದಾಟಗಳು ಹೊಸ ಜೋಡಿಯೊಂದನ್ನು ಹೇಗೆ ಹತ್ತಿರಕ್ಕೆ ತಂದು ಮುಂದಿನ ಬದುಕಿಗೆ ತಯಾರು ಮಾಡುತ್ತೆ ಅನ್ನೋದು ಇಲ್ಲಿನ ಕತೆ.