ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿಯ ಆರ್ಆರ್ಆರ್ ಸಿನಿಮಾ ಚಿತ್ರರಂಗದಲ್ಲಿ ಯಶಸ್ಸಿನ ದಾಖಲೆ ಬರೆಯುತ್ತಿದೆ. ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್ಆರ್ಆರ್ ಇದೀಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಪಿಲ್ಮ್ ಅವಾರ್ಡ್ನಲ್ಲಿ ಅತ್ಯುನ್ನತ 4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಮೂಲಕ ಭಾರತೀಯ ಚಿತ್ರರಂಗಕ್ಕೆ ಹಾಗೂ ದೇಶಕ್ಕೆ ಆರ್ಆರ್ಆರ್ ಗೌರವ ಮತ್ತು ಕೀರ್ತಿಯನ್ನು ತಂದು ಕೊಟ್ಟಿದೆ.
ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಅಭಿನಯಿಸಿರುವ ಈ ಸಿನಿಮಾವು 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ', 'ಅತ್ಯುತ್ತಮ ಆಕ್ಷನ್ ಚಿತ್ರ, 'ಅತ್ಯುತ್ತಮ ಹಾಡು' ಮತ್ತು 'ಅತ್ಯುತ್ತಮ ಸ್ಟಂಟ್' ವಿಭಾಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ವಿಶೇಷ ಮಾನ್ಯತೆಯನ್ನು ಗಳಿಸಿಕೊಂಡಿದೆ. ತಂಡದ ಪರವಾಗಿ ಪ್ರಶಸ್ತಿಯನ್ನು ನಿರ್ದೇಶಕ ಎಸ್ಎಸ್ಎಸ್ ರಾಜಮೌಳಿ ಸಂಭ್ರಮದಿಂದ ಸ್ವೀಕರಿಸಿದರು.
- " class="align-text-top noRightClick twitterSection" data="
">
ಬಳಿಕ ಮಾತನಾಡಿದ ಅವರು, "ಆರ್ಆರ್ಆರ್ ಸಿನಿಮಾ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನನಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ" ಎಂದರು. ಮುಂದುವರಿದು, "ಸಿನಿಮಾವು ಅತ್ಯುತ್ತಮ ಸ್ಟಂಟ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯು ಸ್ಟಂಟ್ ಕೊರಿಯೋಗ್ರಾಫರ್ಗಳ ಪರಿಶ್ರಮಕ್ಕೆ ಸಂದಿದೆ. ತುಂಬಾ ಕಷ್ಟಪಟ್ಟು ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಈ ಪ್ರಶಸ್ತಿಗೆ ನಿಜವಾಗಿಯೂ ಅವರೇ ಅರ್ಹರು" ಎಂದು ಹೇಳಿದರು. ಬಳಿಕ ಮತ್ತೊಮ್ಮೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ಗೆ ಧನ್ಯವಾದಗಳನ್ನು ಅರ್ಪಿಸಿದರು.
ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ: ರಣಬೀರ್, ಆಲಿಯಾ ದಂಪತಿಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಆರ್ಆರ್ಆರ್ ಸೂಪರ್ ಸ್ಟಾರ್ ರಾಮ್ಚರಣ್ ಕೂಡ ಉಪಸ್ಥಿತರಿದ್ದರು. ಈ ಗೆಲುವಿನೊಂದಿಗೆ ಅಭಿಮಾನಿಗಳು ಆಸ್ಕರ್ ಪ್ರಶಸ್ತಿಯ ಮೇಲೆ ತಮ್ಮ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. 'ಆರ್ಆರ್ಆರ್' ಸಿನಿಮಾದ 'ನಾಟು ನಾಟು' ಹಾಡು ಆಸ್ಕರ್ಗೆ ಮೂಲ ಹಾಡು ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಈ ವರ್ಷದ ಜನವರಿಯಲ್ಲಿ ನಾಟು ನಾಟು 'ಅತ್ಯುತ್ತಮ ಮೂಲ ಹಾಡು' ವಿಭಾಗದಲ್ಲಿ 'ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ'ಯನ್ನು ಗೆದ್ದುಕೊಂಡಿತ್ತು. ಬಳಿಕ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ನಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಆರ್ಆರ್ಆರ್ ಸಿನಿಮಾವು ಎರಡು ಸ್ವಾತಂತ್ರ್ಯಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನ ಆಧಾರಿತ ಕಾಲ್ಪನಿಕ ಕಥೆಯಾಗಿದೆ. ತೆಲುಗು ಸೂಪರ್ಸ್ಟಾರ್ಗಳಾದ ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರೀಯಾ ಸರಣ್ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ 1,200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಸಿನಿಮಾದ ಸೂಪರ್ ಹಿಟ್ 'ನಾಟು ನಾಟು' ಹಾಡಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಚಂದ್ರಬೋಸ್ ಅವರು ಈ ಹಾಡನ್ನು ರಚಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಶೇ.90 ರಷ್ಟು ಹಾಡನ್ನು ಅರ್ಧ ದಿನದಲ್ಲಿ ಬರೆದು ಮುಗಿಸಿದ ಅವರು ಉಳಿದ ಶೇ.10ರಷ್ಟನ್ನು ಪೂರ್ಣಗೊಳಿಸಲು ಸುಮಾರು 1 ವರ್ಷ 7 ತಿಂಗಳು ವ್ಯಯಿಸಿದ್ದಾರೆ. ಕೊನೆಗೂ ಅವರ ಕಠಿಣ ಪರಿಶ್ರಮ ಮತ್ತು ತಾಳ್ಮೆಗೆ ಪ್ರತಿಫಲ ಸಿಕ್ಕಿದೆ.
ಇದನ್ನೂ ಓದಿ: 'ಆಭರಣಗಳನ್ನು ಹಿಂದಿರುಗಿಸುತ್ತಿದ್ದೇನೆ..': ವರುಣ್ ಸೂದ್ ತಂಗಿ ಆರೋಪಕ್ಕೆ ದಿವ್ಯಾ ಅಗರ್ವಾಲ್ ಟ್ವೀಟ್