ನವದೆಹಲಿ: ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿದ್ದ ಭಾರತೀಯ ಬ್ಲಾಕ್‌ಬಸ್ಟರ್ ಸಿನಿಮಾಗಳಾದ ಆರ್ಆರ್ಆರ್ ಹಾಗೂ ದಿ ಕಾಶ್ಮೀರಿ ಫೈಲ್ಸ್ ಆಸ್ಕರ್ ಕನಸು ಭಗ್ನಗೊಂಡಿದೆ. ಆದರೆ, ಪಾನ್ ನಳಿನ್ ನಿರ್ದೇಶನದ ಗುಜರಾತಿ ಚಲನಚಿತ್ರ ಚೆಲೋ ಶೋ( ದಿ ಲಾಸ್ಟ್ ಫಿಲ್ಮ್ ಶೋ) ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಮುಂದಿನ ವರ್ಷದ ಪ್ರಶಸ್ತಿಗೆ ಈ ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ(ಎಫ್ಎಫ್ಐ) ತಿಳಿಸಿದೆ. ಚೆಲೋ ಶೋ ಆತ್ಮಚರಿತ್ರೆಯಾಗಿದೆ. ಇದರಲ್ಲಿ ವ್ಯಕ್ತಿಯ ಬಾಲ್ಯದ ಮುಗ್ಧತೆಯನ್ನು ತೋರಿಸಲಾಗಿದೆ. ಭಾವಿನ್ ರಾಬರಿ, ವಿಕಾಸ್ ಬಾಟಾ, ರಿಚಾ ಮೀನಾ, ಭವೇಶ್ ಶ್ರೀಮಾಲಿ, ಡಿಪೆನ್ ರಾವಲ್ ಮತ್ತು ರಾಹುಲ್ ಕೋಲಿ ಸಿನೆಮಾದಲ್ಲಿ ನಟಿಸಿದ್ದಾರೆ. ಸ್ಪೇನ್ನಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಚಿತ್ರ ಪ್ರಶಸ್ತಿ ಗೆದ್ದಿದೆ.
ಇದನ್ನೂ ಓದಿ: ಟ್ರೆಂಡ್ ಸೆಟ್ ಮಾಡಿದ ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಸಿನಿಮಾ ಟೀಸರ್
ಆಸ್ಕರ್ಗೆ ನಾಮನಿರ್ದೇಶನಗೊಂಡಿರುವ ಈ ಚಿತ್ರ ಗುಜರಾತ್ ಸೇರಿದಂತೆ ದೇಶಾದ್ಯಂತ ಅಕ್ಟೋಬರ್ 14, 2022 ರಂದು ಮತ್ತೊಮ್ಮೆ ರಿಲೀಸ್ ಆಗಲಿದೆ. ಆಸ್ಕರ್ ಪ್ರಶಸ್ತಿಗೋಸ್ಕರ ಪ್ರತಿ ವರ್ಷ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಎಲ್ಲ ಭಾರತೀಯ ಭಾಷೆಗಳ ಆಯ್ದ ಚಲನಚಿತ್ರಗಳಿಂದ ಒಂದನ್ನು ಆಸ್ಕರ್ಗೆ ಕಳುಹಿಸುತ್ತದೆ.
ಪಾನ್ ನಳಿನ್ ಪ್ರತಿಕ್ರಿಯಿಸಿ, ಚೆಲೋ ಶೋ ಚಿತ್ರವನ್ನು ನಂಬಿಕೆ ಇಟ್ಟು ಆಯ್ಕೆ ಮಾಡಿರುವುದಕ್ಕಾಗಿ ಧನ್ಯವಾದಗಳು. ನನಗಿದನ್ನು ನಿಜಕ್ಕೂ ನಂಬಲಾಗುತ್ತಿಲ್ಲ. ಮನರಂಜನೆ, ಸ್ಫೂರ್ತಿ ಮತ್ತು ಜ್ಞಾನದ ಬೆಳಕು ಚೆಲ್ಲುವ ಚಿತ್ರದ ಮೇಲೆ ನನಗೆ ನಂಬಿಕೆ ಇತ್ತು ಎಂದರು.
ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಹಾಗೂ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರಿ ಫೈಲ್ಸ್ ಚಿತ್ರಗಳು ಆಸ್ಕರ್ ರೇಸ್ನಲ್ಲಿದ್ದವು.