ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ 'ಬಾನದಾರಿಯಲ್ಲಿ'. ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರೋ ಬಾನದಾರಿಯಲ್ಲಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಮೂಲಕ ಅನಾವರಣಗೊಂಡಿರುವ ಬಾನದಾರಿಯಲ್ಲಿ ಟ್ರೇಲರ್ ಅನ್ನು ಬರೋಬ್ಬರಿ ಒಂದುವರೆ ಮಿಲಿಯನ್ಗೂ ಅಧಿಕ ವೀಕ್ಷಕರು ವೀಕ್ಷಿಸಿದ್ದಾರೆ. ಟ್ರೇಲರ್ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದ್ದು, ಪ್ರೇಕ್ಷಕರು ಸಿನಿಮಾ ಕುರಿತು ಕುತೂಹಲ ವ್ಯಕ್ತಪಡಿಸಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಸಿನಿಮಾ ಗೆಲ್ಲುವ ವಿಶ್ವಾಸದಲ್ಲಿ ಗೋಲ್ಡನ್ ಸ್ಟಾರ್: ಮೊದಲು ಮಾತು ಆರಂಭಿಸಿದ ಗೋಲ್ಡನ್ ಸ್ಟಾರ್ ಗಣೇಶ್, ''ಈವರೆಗೂ ಮಾಡಿರದ ಪಾತ್ರ ಇದು. 'ಬಾನದಾರಿಯಲ್ಲಿ' ಪ್ರೀತಿಯ ಕುರಿತಾದ ಚಿತ್ರ. ಪುನೀತ್ ರಾಜ್ಕುಮಾರ್ ಅವರು ಅಭಿನಯಿಸಿದ್ದ ಬಾನದಾರಿಯಲ್ಲಿ ಯಶಸ್ವಿ ಹಾಡಿಗೂ ನಮ್ಮ ಸಿನಿಮಾ ಕಥೆಗೂ ಹೊಂದಾಣಿಕೆಯಾಗುತ್ತದೆ. ಹಾಗಾಗಿ ಬಾನದಾರಿಯಲ್ಲಿ ಎಂಬ ಶೀರ್ಷಿಕೆ ಇಟ್ಟಿದ್ದೇವೆ. ಪ್ರೀತಂ ಗುಬ್ಬಿ ಹಾಗೂ ನಾನು ಮೊದಲಿನಿಂದಲೂ ಸ್ನೇಹಿತರು. ನಮ್ಮ ಕಾಂಬಿನೇಶನ್ನಲ್ಲಿ ಸಾಕಷ್ಟು ಸಿನಿಮಾಗಳು ಮೂಡಿ ಬಂದಿವೆ. ಆದರೆ, ಈ ಚಿತ್ರ ಎಲ್ಲರ ಮನಸ್ಸಿಗೂ ಬಹಳ ಹತ್ತಿರವಾಗುತ್ತದೆ. ಕೀನ್ಯಾ, ಆಫ್ರಿಕಾ ಸೇರಿದಂತೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅಲ್ಲಿ ಚಿತ್ರೀಕರಣ ನಡೆಸುವುದು ಅಷ್ಟು ಸುಲಭವಲ್ಲ. ನಮ್ಮ ತಂತ್ರಜ್ಞರ ಶ್ರಮವನ್ನು ಮೆಚ್ಚಲೇಬೇಕು. ಚಿತ್ರದ ನಾಯಕಿಯರು, ರಂಗಾಯಣ ರಘು ಅವರೂ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಬಹಳ ಚೆನ್ನಾಗಿದೆ. ಈ ಸಿನಿಮಾ ನಿಜಕ್ಕೂ ಸಿನಿಪ್ರೇಮಿಗಳಿ ಇಷ್ಟವಾಗಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಭಿನ್ನ ಪಾತ್ರದಲ್ಲಿ ಗಣೇಶ್: ಇನ್ನೂ ಹಿರಿಯ ನಟ ರಂಗಾಯಣ ರಘು ಮಾತನಾಡಿ, ಈ ಚಿತ್ರದಲ್ಲಿ ನನ್ನದು ನಾಯಕಿಯ ತಂದೆಯ ಪಾತ್ರ. ಗಣೇಶ್ ಬಗ್ಗೆ ಹೇಳಬೇಕೆಂದರೆ, ನೀವು ಇಷ್ಟು ದಿನ ನೋಡಿರುವ ಗಣೇಶ್ ಬೇರೆ. ಈ ಚಿತ್ರದಲ್ಲಿ ನೋಡುವ ಗಣೇಶ್ ಬೇರೆ. ಅಂತಹ ವಿಭಿನ್ನ ಪಾತ್ರ ಎನ್ನಬಹುದು. ಕೀನ್ಯಾದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಬರುತ್ತಿದ್ದ ಪ್ರಾಣಿಗಳನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ ಎಂದು ರಂಗಾಯಣ ರಘು ತಿಳಿಸಿದರು.
ಇದನ್ನೂ ಓದಿ: ರಶ್ಮಿಕಾ, ಶ್ರೀಲೀಲಾ ಬಳಿಕ ಆಶಿಕಾ ರಂಗನಾಥ್.. ಟಾಲಿವುಡ್ ಸೂಪರ್ಸ್ಟಾರ್ ಜೊತೆ ನಟಿಸುವ ಆಫರ್
ಬಾನದಾರಿಯಲ್ಲಿ ಚಿತ್ರದಲ್ಲಿ ಗಣೇಶ್ ಜೊತೆ ಇಬ್ಬರು ನಾಯಕಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ. ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಗೋಲ್ಡ್ನ್ ಸ್ಟಾರ್ಗೆ ಜೋಡಿಯಾಗಿದ್ದಾರೆ. ನಟಿ ರುಕ್ಮಿಣಿ ವಸಂತ್ ಮಾತನಾಡಿ, ನಾನು ಲೀಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ನಾನು ಈ ಚಿತ್ರಕ್ಕಾಗಿ ಸರ್ಫಿಂಗ್ ಕಲಿತ್ತಿದ್ದೇನೆ ಎಂದು ತಿಳಿಸಿದರು. ಬಳಿಕ ನಟಿ ರೀಷ್ಮಾ ನಾಣಯ್ಯ ಮಾತನಾಡಿ, ಕಾದಂಬರಿ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಅಭಿನಯಿಸಿದ್ದು ಬಹಳ ಖುಷಿಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Jawan celebration: ಚಲೇಯಾ ಹಾಡು ಪ್ರದರ್ಶನವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಗೆಳತಿಗೆ ಪ್ರಪೋಸ್ - ವಿಡಿಯೋ ನೋಡಿ!
ಈ ಚಿತ್ರಕ್ಕೆ ಅಭಿಷೇಕ್ ಕಲ್ಲತ್ತಿ ಛಾಯಾಗ್ರಾಹಣ, ಮಾಸ್ತಿ ಅವರ ಸಂಭಾಷಣೆ ಹಾಗು ಅರ್ಜುನ್ ಜನ್ಯ ಅವರ ಸಂಗೀತವಿದೆ. ಶ್ರೀವಾರಿ ಟಾಕೀಸ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಟ್ರೇಲರ್ ಸದ್ದು ಮಾಡುತ್ತಿದೆ. ಗೆಲ್ಲುವ ಭರವಸೆ ಹುಟ್ಟಿಸಿರೋ ಬಾನದಾರಿಯಲ್ಲಿ ಸಿನಿಮಾ ಸೆಪ್ಟೆಂಬರ್ 28 ರಂದು ಕೆಆರ್ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕ್ರಿಕೆಟ್ ಆಟಗಾರನಾಗಿ ಗಣಿ ಸಿನಿಪ್ರೇಮಿಗಳನ್ನು ಎಷ್ಟರ ಮಟ್ಟಿಗೆ ರಂಜಿಸುತ್ತಾರೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.