'ಗೇಮ್ ಆಫ್ ಥ್ರೋನ್ಸ್' ಸಿನಿಮಾ ಖ್ಯಾತಿಯ ಹಾಲಿವುಡ್ ನಟ ಡ್ಯಾರೆನ್ ಕೆಂಟ್ ನಿಧನರಾಗಿದ್ದಾರೆ. ಆಗಸ್ಟ್ 11ರಂದು ಡ್ಯಾರೆನ್ ತಮ್ಮ 39ನೇ ವಯಸ್ಸಿಗೆ ಕೊನೆಯುಸಿರೆಳೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಕ್ಯಾರಿ ಡಾಡ್ ಅಸೋಸಿಯೇಟ್ಸ್ ಮಂಗಳವಾರ ಮಾಡಿರುವ ಟ್ವೀಟ್ನಲ್ಲಿ, 'ನಮ್ಮ ಆತ್ಮೀಯ ಸ್ನೇಹಿತ ಹಾಗೂ ಕ್ಲೈಂಟ್ ಡ್ಯಾರೆನ್ ಕೆಂಟ್ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದ ಜೊತೆಗೆ ನಾವಿದ್ದೇವೆ' ಎಂದು ಹೇಳಿದೆ.
ನಟನ ಸಾವಿಗೆ ಕಾರಣ ಬಹಿರಂಗವಾಗಿಲ್ಲ. ಕೆಂಟ್ ಅವರು ಎಸೆಕ್ಸ್ನಲ್ಲಿ ಹುಟ್ಟಿ ಬೆಳೆದವರು. ನಂತರ ಇಟಾಲಿಯನ್ ಕಾಂಟಿನೆಂಟ್ನಲ್ಲಿ 2007ರಲ್ಲಿ ಪದವಿ ಪಡೆದರು. 2004ರಲ್ಲಿ ಬಿಡುಗಡೆಯಾಗಿದ್ದ ಬ್ರಿಟಿಷ್ ಕಾಮಿಡಿ ಸಿರೀಸ್ 'ಶೇಮ್ಲೆಸ್' ಹಾಗೂ 2008ರಲ್ಲಿ ತೆರೆಗೆ ಬಂದ 'ಮಿರರ್ಸ್' ಹಾರರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರದಲ್ಲಿ ಕಾಣಿಸಿಕೊಂಡ ಎಮ್ಮಿ ಪ್ರಶಸ್ತಿ ವಿಜೇತ 'ಗೇಮ್ ಆಫ್ ಥ್ರೋನ್ಸ್' ಸಿನಿಮಾ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು.
ಗೇಮ್ ಆಫ್ ಥ್ರೋನ್ಸ್ ಸೀರೀಸ್‌ನಲ್ಲಿ ಸಿನಿಮಾದಲ್ಲಿ ಸ್ಲೇವರ್ಸ್ ಬೇನಲ್ಲಿ ಕುರಿ ಕಾಯುವವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2023ರಲ್ಲಿ ತೆರೆಕಂಡ 'ಡಂಜಿಯನ್ಸ್ ಆ್ಯಂಡ್ ಡ್ರಾಗನ್ಸ್: ಹಾನರ್ ಅಮಂಗ್ಸ್ ಥೀವ್ಸ್' ಸಿನಿಮಾದಲ್ಲಿ ಪುನಶ್ಚೇತನಗೊಂಡ ಶವದ (reanimated corpse) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ಭಾರಿ ಪ್ರಶಂಸೆ ಬಂದಿತ್ತು.
ಇದಲ್ಲದೇ, 'ಸ್ನೋ ವೈಟ್ ಆ್ಯಂಡ್ ದಿ ಹಂಟ್ಸ್ಮ್ಯಾನ್', 'ಮಾರ್ಷಲ್ಸ್ ಲಾ', 'ಬ್ಲಡಿ ಕಟ್ಸ್', 'ದಿ ಫ್ರಾಂಕೆನ್ಸ್ಟೈನ್ ಕ್ರಾನಿಕಲ್ಸ್', 'ಬ್ಲಡ್ ಡ್ರೈವ್' ಹಾಗೂ 'ಬರ್ಡ್ ಸಾರೋ' ಇತ್ಯಾದಿ ಸಿನಿಮಾಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಹಾಗೂ ಮಾಜಿ ಸಹನಟರು ನಟನ ನಿಧನಕ್ಕೆ ಕಂಬನಿ ಮಿಡಿದಿದ್ದು, ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ (ಟ್ವಿಟರ್) ಸಂತಾಪ ಸೂಚಿಸಿದ್ದಾರೆ.
ಡ್ಯಾರೆನ್ ಕೆಂಟ್ 2012ರಲ್ಲಿ ಸನ್ನಿ ಬಾಯ್ ಸಿನಿಮಾದಲ್ಲಿ ಸೂರ್ಯನ ಬೆಳಕಿನಡಿಗೆ ಹೋಗಲು ಸಾಧ್ಯವೇ ಆಗದ ಅಪರೂಪದ ಚರ್ಮವಿದ್ದ ಹುಡುಗನ ಪಾತ್ರಕ್ಕಾಗಿ 'ವ್ಯಾನ್ ಡಿ'ಒರ್' ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಈ ಸಿನಿಮಾದ ಪಾತ್ರದಂತೆಯೇ ಡ್ಯಾರೆನ್ ಕೆಂಟ್ ಆಸ್ಟಿಯೋಪೊರೋಸಿಸ್ ಹಾಗೂ ಸಂಧಿವಾತದ ಜೊತೆಗೆ ಚರ್ಮದ ಕಾಯಿಲೆಯೊಂದಿಗೂ ಹೋರಾಡಿದ್ದರು. ಪ್ರಶಸ್ತಿ ವಿಜೇತ ಬರಹಗಾರ ಹಾಗೂ ನಿರ್ದೇಶಕರಾಗಿದ್ದ ಕೆಂಟ್ ನಿರ್ದೇಶನದ 'ಯು ನೋ ಮಿ' ಕಿರುಚಿತ್ರ 2012ರಲ್ಲಿ ಜನವರಿ ಪ್ರಶಸ್ತಿಗೆ ಭಾಜನವಾಗಿತ್ತು.
ಇದನ್ನೂ ಓದಿ: Bindeshwar Pathak: 'ಭಾರತದ ಟಾಯ್ಲೆಟ್ ಮ್ಯಾನ್' ಖ್ಯಾತಿಯ ಬಿಂದೇಶ್ವರ್ ಪಾಠಕ್ ಇನ್ನಿಲ್ಲ: ರಾಷ್ಟ್ರಪತಿ, ಪ್ರಧಾನಿ ಸಂತಾಪ