ಬೆಂಗಳೂರು: ಇತ್ತೀಚೆಗೆ ರಾಜಧಾನಿಯಲ್ಲಿ ನಡೆದಿದ್ದ ಸೈಮಾ ಅವಾರ್ಡ್ಸ್ 2022 ಕಾರ್ಯಕ್ರಮದಂದು ಪಂಚತಾರಾ ಹೋಟೆಲ್ನಲ್ಲಿ ನಸುಕಿನಜಾವದವರೆಗೂ ಪಾರ್ಟಿ ಮಾಡಿದ ಆರೋಪದಡಿ ಹೋಟೆಲ್ ಮ್ಯಾನೇಜರ್ ಹಾಗೂ ಪಾರ್ಟಿ ಸಂಘಟಿಸಿದವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದೇ ತಿಂಗಳು 12ರಂದು ನಗರದ ಅರಮನೆ ಮೈದಾನದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಜರುಗಿತ್ತು. ಇದರಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ನಲ್ಲಿ ಚಿತ್ರರಂಗದವರು ಉಳಿದುಕೊಂಡಿದ್ದರು. ಅದೇ ದಿನ ರಾತ್ರಿ ಹೋಟೆಲ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿರುವುದು ಕಂಡುಬಂದಿದೆ. ನಸುಕಿನಜಾವ 3.30ರವರೆಗೂ ಪಾರ್ಟಿ ನಡೆದಿದೆ.
ಇದನ್ನೂ ಓದಿ: ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ...ಮೋದಿ ಸೇರಿ ಅನೇಕರ ಸಂತಾಪ
ಪಾರ್ಟಿಯಲ್ಲಿ ಚಲನಚಿತ್ರರಂಗದವರು ಸಹ ಭಾಗಿಯಾಗಿರುವ ಶಂಕೆಯಿದೆ. ನಿಗದಿತ ಅವಧಿ ಮೀರಿ ಪಾರ್ಟಿ ಮಾಡುವ ಮೂಲಕ ನಿಯಮ ಉಲ್ಲಂಘಿಸಿರುವ ಆರೋಪದ ಮೇಲೆ ಹೋಟೆಲ್ ಮ್ಯಾನೇಜರ್ ಹಾಗು ಆಯೋಜಕರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.