ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾಗಳ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ ಚಾಪ್ಟರ್ 2 ಬಳಿಕ ಇವರ ಮುಂದಿನ ಸಿನಿಮಾವನ್ನು ಯಾವ ನಿರ್ದೇಶಕರು ಹಾಗೂ ಯಾವ ಪ್ರೊಡಕ್ಷನ್ ಹೌಸ್ ಮಾಡಲಿದೆ ಎಂಬುದೀಗ ಅಭಿಮಾನಿಗಳ ಕುತೂಹಲ. ಯಶ್ ಸ್ಯಾಂಡಲ್ವುಡ್ ಮಾತ್ರವಲ್ಲ, ವಿದೇಶದಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿರುವ ಅವರ ನಿವಾಸದ ಸುತ್ತಮುತ್ತ ಅಭಿಮಾನಿಗಳ ದಂಡೇ ನೆರೆದಿತ್ತು. ಗಾಲ್ಫ್ ಕೋರ್ಸ್ ರಸ್ತೆಯಲ್ಲಿರೋ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ ಮುಂದೆ ಸೇರಿದ ಅಭಿಮಾನಿಗಳು ನೆಚ್ಚಿನ ನಟನ ದರ್ಶನಕ್ಕೆ ತುದಿಗಾಲಲ್ಲಿ ನಿಂತಿದ್ದರು.
ಹುಟ್ಟುಹಬ್ಬದಂದು ಸ್ಟಾರ್ ನಟರನ್ನು ತಮ್ಮ ಅಭಿಮಾನಿಗಳು ಭೇಟಿ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ಯಶ್ ಅವರು ಕುಟುಂಬದೊಂದಿಗೆ ದುಬೈ ಟ್ರಿಪ್‌ಗೆ ಹೋಗಿದ್ದರು. ಹಾಗಾಗಿ, ಅಭಿಮಾನಿಗಳೊಂದಿಗೆ ಕಾಲ ಕಳೆಯಲು ಅವರಿಗೆ ಸಾಧ್ಯವಾಗಿರಲಿಲ್ಲ. ಇಂದು ಯಶ್ ಅವರನ್ನು ಭೇಟಿಯಾದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ನಟನೊಂದಿಗೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.
ಕೆಜಿಎಫ್ ತೆರೆಕಂಡು 9 ತಿಂಗಳು ಕಳೆದರೂ 19ನೇ ಚಿತ್ರದ ಬಗ್ಗೆ ಯಶ್ ಚಿಕ್ಕ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಆದರೆ, ಮುಂದಿನ ಚಿತ್ರವನ್ನು ನರ್ತನ್, ಶಂಕರ್, ಪುರಿ ಜಗನ್ನಾಥ್ ಡೈರೆಕ್ಟ್ ಮಾಡ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
"ನನ್ನ ಮುಂದಿನ ಚಿತ್ರ ಯಾವ ರೀತಿ ಇರಬೇಕು ಅಂತ ನನ್ನ ಅಭಿಮಾನಿಗಳೇ ಡಿಸೈಡ್ ಮಾಡ್ತಾರೆ. ನಾನು ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡಬೇಕು ಅನ್ನೋದು ನನ್ನನ್ನು ಪ್ರೀತಿಸೋ ಹೃದಯಗಳ ಬಯಕೆ" ಎಂದು ಅವರು ಹಿಂದೊಮ್ಮೆ ಹೇಳಿದ್ದರು. ಈ ನಡುವೆ, ಮುಂದಿನ ಚಿತ್ರಕ್ಕೆ ಹಾಲಿವುಡ್‌ನ ನಿರ್ದೇಶಕ, ಸ್ಟಂಟ್ ಮಾಸ್ಟರ್, ಕ್ಯಾಮರಾ ಮ್ಯಾನ್ಗಳನ್ನು ದೇಶಕ್ಕೆ ಕರೆತರಲು ಯಶ್ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಮಾತಗಳೂ ಇವೆ.
ಇದನ್ನೂ ಓದಿ: 'ಕಬ್ಜ' ಚಿತ್ರದ ತೆಲುಗು ವಿತರಣಾ ಹಕ್ಕುಗಳು ನಟ ನಿತಿನ್ ಪಾಲು!