2023ರ ಕೊನೆಯ ತಿಂಗಳಾದ ಡಿಸೆಂಬರ್ನಲ್ಲಿ ಎರಡು ಬಹು ನಿರೀಕ್ಷೆಯ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದೆಡೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ 'ಸಲಾರ್' ಕೌತುಕ ಹುಟ್ಟಿಸಿದರೆ, ಮತ್ತೊಂದೆಡೆ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಶಾರುಖ್ ಖಾನ್ ಅವರ 'ಡಂಕಿ' ತೆರೆ ಕಾಣಲಿದೆ. ಇವೆರಡೂ ಕೂಡ ವಿಶ್ವದಾದ್ಯಂತ ರಿಲೀಸ್ ಆಗುತ್ತಿರುವ ಹೈ ಬಜೆಟ್ ಸಿನಿಮಾಗಳು. ಈಗಾಗಲೇ 'ಹಾಯ್ ನಾನ್ನ' ಮತ್ತು 'ಅನಿಮಲ್' ಚಿತ್ರಗಳು ಥಿಯೇಟರ್ಗಳಲ್ಲಿ ಧೂಳೆಬ್ಬಿಸುತ್ತಿವೆ.
ಇದೀಗ ಮತ್ತೆರಡು ಸ್ಟಾರ್ಗಳ ಸಿನಿಮಾಗಳು ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆಯೇ ಚಿತ್ರತಂಡ ಮುಂಗಡ ಬುಕ್ಕಿಂಗ್ ಚುರುಕುಗೊಳಿಸಿದೆ. ಈ ವಾರಾಂತ್ಯದಲ್ಲಿ ಭಾರತದಲ್ಲಿ ಟಿಕೆಟ್ಗಳ ಮಾರಾಟ ಶುರುವಾಗಲಿದೆ ಎನ್ನಲಾಗಿದೆ. ಆದರೆ, ವಿದೇಶಗಳಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಬುಕ್ಕಿಂಗ್ ಆರಂಭವಾಗಿದೆ. ಈ ಎರಡು ಸಿನಿಮಾಗಳ ಟಿಕೆಟ್ಗಳನ್ನು ಅಭಿಮಾನಿಗಳು ಕೂಡ ಭಾರಿ ಸಂಖ್ಯೆಯಲ್ಲಿ ಖರೀದಿಸಿದ್ದಾರೆ.
'ಸಲಾರ್' ಡಿಸೆಂಬರ್ 21ರಂದು ಅಮೆರಿಕದಲ್ಲಿ ಬಿಡುಗಡೆಯಾಗಲಿದೆ. 347 ಸ್ಥಳಗಳಲ್ಲಿ ಸುಮಾರು 1,119 ಸ್ಕ್ರೀನ್ಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಆದರೆ, 'ಸಲಾರ್' ಇದುವರೆಗೆ ಸುಮಾರು 22,000 ಟಿಕೆಟ್ಗಳ ಮಾರಾಟದ ಮೂಲಕ $593,657 (ಸುಮಾರು 4.94 ಕೋಟಿ ರೂಪಾಯಿ) ಸಂಗ್ರಹಿಸಿದೆ. ಅಮೆರಿಕಾದಲ್ಲಿ ಈ ಚಿತ್ರಕ್ಕೆ ಎಷ್ಟು ಕ್ರೇಜ್ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ.
ಮತ್ತೊಂದೆಡೆ, 'ಡಂಕಿ' ಚಿತ್ರದ ಮುಂಗಡ ಬುಕ್ಕಿಂಗ್ ಕೂಡ ದಾಖಲೆ ಮಟ್ಟದಲ್ಲಿದೆ ಎಂದು ವರದಿಯಾಗಿದೆ. ಸುಮಾರು 328 ಸ್ಥಳಗಳಲ್ಲಿ 925 ಶೋಗಳಿಗೆ ಸುಮಾರು 6,514 ಟಿಕೆಟ್ಗಳು ಮಾರಾಟವಾಗಿವೆ. ಇದರಿಂದ ಸರಿಸುಮಾರು 90,292 ಡಾಲರ್ ಅಂದರೆ ಸುಮಾರು 75 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ.
ಈ ಎರಡು ಸಿನಿಮಾಗಳು ಸಮಾನವಾಗಿ ತೆರೆ ಕಂಡರೂ 'ವಾಂಕಾ', 'ಅಕ್ವಾಮನ್' ಮತ್ತು 'ದಿ ಲಾಸ್ಟ್ ಕಿಂಗ್ಡಮ್'ನಂತಹ ಬ್ಲಾಕ್ಬಸ್ಟರ್ಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ. ಆದರೆ ಈ ಎರಡು ಚಿತ್ರಗಳಲ್ಲಿ ಯಾವುದು ಅಭಿಮಾನಿಗಳನ್ನು ಹೆಚ್ಚು ಮೆಚ್ಚಿಸಲಿದೆ ಮತ್ತು ಬಾಕ್ಸ್ ಆಫೀಸ್ನಲ್ಲಿ ಯಾವುದು ಬ್ಲಾಕ್ಬಸ್ಟರ್ ಆಗಲಿದೆ ಎಂದು ತಿಳಿಯಲು ಡಿಸೆಂಬರ್ 22ರವೆಗೆ ಕಾಯಲೇಬೇಕು.
'ಸಲಾರ್' ರೂವಾರಿಗಳು: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ 'ಸಲಾರ್'ಗೆ ಆ್ಯಕ್ಷನ್ ಕಟ್ ಹೇಳಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಅವರಂತಹ ಸ್ಟಾರ್ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, 'ಕೆಜಿಎಫ್' ಚಿತ್ರತಂಡವೇ ಈ ಸಿನಿಮಾಗೂ ಕೆಲಸ ಮಾಡಿದೆ.
'ಡಂಕಿ' ಚಿತ್ರತಂಡ: ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ, ಅನಿಲ್ ಗ್ರೋವರ್, ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೋಮನ್ ಇರಾನಿ ಮತ್ತು ವಿಕ್ರಮ್ ಕೊಚ್ಚಾರ್ ಕೂಡ ನಟಿಸಿದ್ದಾರೆ. ಕನಿಕಾ ಧಿಲ್ಲೋನ್, ರಾಜ್‌ಕುಮಾರ್ ಹಿರಾನಿ ಮತ್ತು ಅಭಿಜಿತ್ ಜೋಶಿ ಸೇರಿ ಬರೆದಿದ್ದಾರೆ. ಸಿನಿಮಾ ತಮ್ಮ ತಾಯ್ನಾಡಾದ ಭಾರತಕ್ಕೆ ಮರಳಲು ಬಯಸುವ ಜನರ ಗುಂಪಿನ ಕುರಿತಾಗಿದೆ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಿಂದ ಡಂಕಿ ನಿರ್ಮಾಣಗೊಂಡಿದೆ.
ಇದನ್ನೂ ಓದಿ: Salaar vs Dunki: ಟೀಸರ್ ವೀಕ್ಷಣೆಯಲ್ಲಿ 'ಸಲಾರ್' ಮೇಲುಗೈ