ಸ್ಯಾಂಡಲ್ವುಡ್ನಲ್ಲಿ ನಿನ್ನೆಯಷ್ಟೇ ಕಿರುತೆರೆ ನಟ ಸಂಪತ್ ಜಯರಾಮ್ ನಿಧನರಾಗಿದ್ದರು. ಇದೀಗ 'ಟಪೋರಿ' ಸಿನಿಮಾ ಖ್ಯಾತಿಯ ಸತ್ಯ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ಮಿಂಚಿದ ಸತ್ಯ, ಇಂದು ನಿಧನರಾಗಿದ್ದಾರೆ. 'ಟಪೋರಿ' ಚಿತ್ರದಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಸತ್ಯ, ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಟಪೋರಿ ಸತ್ಯ, ಆಸ್ಫತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಟಪೋರಿ ಸತ್ಯ ಅವರಿಗೆ 45 ವರ್ಷ ಆಗಿತ್ತು.
ಟಪೋರಿ ಸತ್ಯ ಲೂಸ್ ಮಾದ ಯೋಗಿ ಅಭಿನಯದ 'ನಂದ ಲವ್ಸ್ ನಂದಿತಾ' ಸಿನಿಮಾ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 'ಮೇಳ' ಎನ್ನುವ ಸಿನಿಮಾವನ್ನು ಕೂಡ ಸತ್ಯ ಅವರು ನಿರ್ದೇಶನ ಮಾಡಿದ್ದರು. ಮನೆಗೆ ಆಧಾರವಾಗಿದ್ದ ಸತ್ಯ ಅವರ ನಿಧನದಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಇನ್ನು ಮಗನ ಸಾವಿನ ವಿಷಯ ತಿಳಿದು ತಾಯಿ ರುಕ್ಕಮ್ಮ ಆಘತಾಕ್ಕೊಳಗಾಗಿದ್ದು, ಸತ್ಯ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬನಶಂಕರಿ ಮೂರನೇ ಹಂತದಲ್ಲಿರುವ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಸಾವಿನ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಧ್ಯಾಹ್ನ ಹೊತ್ತಿಗೆ ಬನಶಂಕರಿಯ ಚಿತಾಗರಾದಲ್ಲಿ ಸತ್ಯ ಅವರ ಅಂತ್ಯ ಸಂಸ್ಕಾರ ಮಾಡಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ 'ಅಗ್ನಿಸಾಕ್ಷಿ' ನಟ