ಕನ್ನಡ ಸಿನಿಮಾ ರಂಗದಲ್ಲಿ ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಸಿನಿಮಾದ ಮೂಲಕ ಖ್ಯಾತಿ ಪಡೆದ ಪ್ರತಿಭಾವಂತ ನಿರ್ದೇಶಕ ಸತ್ಯ ಪ್ರಕಾಶ್. ಎರಡು ಅಪರೂಪದ ಸಿನಿಮಾಗಳ ಮೂಲಕ ಜನಮೆಚ್ಚುಗೆ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಸತ್ಯ ಪ್ರಕಾಶ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ನಿರ್ದೇಶಕ, ನಿರ್ಮಾಪಕನಾಗಿ ಯಶಸ್ವಿಯಾಗಿರುವ ಸತ್ಯ ಪ್ರಕಾಶ್ ಸದ್ಯ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಈ ನಡುವೆ ನಿರ್ದೇಶಕರು ನಟನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಜೊತೆಗೆ ತಾವೇ ಬರೆದ ಕಥೆಗೆ ನಿರ್ದೇಶನ ಮಾಡಿ ನಿರ್ಮಾಣ ಮಾಡಿ ನಟನಾಗುವುದು ಒಂದು ರೀತಿ ಟ್ರೆಂಡ್ ಆಗಿದೆ. ಅಂತಹದ್ದೇ ಒಂದು ಪ್ರಯತ್ನಕ್ಕೆ ಸತ್ಯ ಪ್ರಕಾಶ್ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತ್ಯ ಪ್ರಕಾಶ್ ಇದೊಂದು ಹೊಸ ರೀತಿಯ ಕಥೆ.
ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಘಟನೆ ನಡೆದಿರುತ್ತದೆ. ನನ್ನ ಬದುಕಿನಲ್ಲೂ ಒಂದಷ್ಟು ಘಟನೆಗಳು ನಡೆದಿವೆ. ಅವೆಲ್ಲವನ್ನೂ ಆಧರಿಸಿ ಕಥೆ ಹೆಣೆದಿದ್ದೇನೆ. ಈ ಕಥೆಯಲ್ಲಿ ಒಬ್ಬ ಹೊಸ ನಾಯಕ ನನಗೆ ಕಾಣುತ್ತಿದ್ದಾನೆ ಆದರಿಂದ ನಾನೇ ನಟಿಸುತ್ತಿದ್ದೇನೆ. ನಾಯಕ ನಟ ಅನ್ನೋದಕ್ಕಿಂತ ಮುಖ್ಯ ಪಾತ್ರ ಎಂದಷ್ಟೇ ಹೇಳಬಹುದು ಎನ್ನುತ್ತಾರೆ ನಿರ್ದೇಶಕ ಸತ್ಯ ಪ್ರಕಾಶ್.
ಈ ಚಿತ್ರ ಸಾಮಾನ್ಯ ಮನುಷ್ಯನ ಬದುಕಿಗೆ ಸಂಬಂಧಿಸಿದ ಕಥೆಯನ್ನು ಒಳಗೊಂಡಿದೆ. ಸಾಮಾನ್ಯ ವ್ಯಕ್ತಿಯ ಬದುಕಲ್ಲಿ ಹಾಸ್ಯ,ಭಾವನೆ, ರಾಜಕೀಯ ಎಲ್ಲವೂ ಇರುತ್ತದೆ. ಈ ಚಿತ್ರದಲ್ಲೂ ಅವೆಲ್ಲವೂ ಇದೆ. ಕಥಾನಾಯಕನಿಗೆ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣವಿರುತ್ತದೆ. ಆದರೆ ಆತನ ಒಳ್ಳೆಯ ಗುಣದಿಂದ ಅವನಿಗಾಗುವ ಪ್ರಯೋಜನ ಹಾಗೂ ತೊಂದರೆಗಳೇನು ಎಂಬುದನ್ನು ಹಾಸ್ಯದ ಮೂಲಕ ಹೇಳ ಹೊರಟಿದ್ದೇನೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಾನು ಯಾವಾಗಲೂ ಯೂನಿವರ್ಸಲ್ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಸಿನಿಮಾವನ್ನು ಎಲ್ಲಾ ವರ್ಗದ ಜನರು ನೋಡಬೇಕು ಎನ್ನುವುದು ನನ್ನ ಆಸೆ. ಈ ಚಿತ್ರದ ಕಥೆಯೂ ಹಾಗೆ ಇದೆ. ಸಿನಿಮಾ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ. ರಾಮಾ ರಾಮಾ ರೇ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : 'ವೀರಪ್ಪನ್ ಹಂಗರ್ ಆಫ್ ಕಿಲ್ಲಿಂಗ್': ವಿವಾದದಲ್ಲಿ ಪತ್ನಿ ಮುತ್ತುಲಕ್ಷ್ಮಿಗೆ ಹಿನ್ನಡೆ