ದೂದ್ ಪೇಡ ದಿಗಂತ ಗೋವಾದಲ್ಲಿ ಪಟ್ಟಾಗಿ ಚೇತರಿಸಿಕೊಂಡು ಸಿನಿಮಾಕ್ಕೆ ಮರಳಿದ್ದಾರೆ. ಬೆನ್ನು ನೋವಿನಿಂದ ಗುಣಮುಖರಾಗಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2ರ ಗೆಲುವಿನಲ್ಲಿ ದಿಗಿ ಇದ್ದಾರೆ. ಈ ಸಂತಸದ ಬೆನ್ನಲ್ಲೇ ರಕ್ಷಿತ್ ಶೆಟ್ಟಿಯ ಪರಂವಃ ಸ್ಟುಡಿಯೋಸ್ನಲ್ಲಿ ದಿಗಂತ್ ನಟನೆಯ ಬ್ಯಾಚುಲರ್ ಪಾರ್ಟಿ ಸಿನಿಮಾದ ಬಗ್ಗೆ ಇತ್ತಿಚೆಗಷ್ಟೇ ಮಾಹಿತಿ ಹೊರಬಿದ್ದಿದೆ. ಈಗ ದಿಗಂತ್ 'ಎಡಗೈಯೇ ಅಪಘಾತಕ್ಕೆ ಕಾರಣ' ಎಂದು ಹೇಳುತ್ತಿದ್ದಾರೆ. ಯಾವ ಅಪಘಾತದ ಬಗ್ಗೆ ಹೇಳುತ್ತಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಎಡಗೈಯೇ ಅಪಘಾತಕ್ಕೆ ಕಾರಣ ಎಂಬ ಟೈಟಲ್ ಹೊಂದಿರುವ ಚಿತ್ರ, ಬೆಂಗಳೂರಿನ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಸೈಲೆಂಟ್ ಆಗಿ ಮುಹೂರ್ತ ಮಾಡಿಕೊಂಡಿದೆ. ಈ ಸಿನಿಮಾದಲ್ಲಿ ಧನು ದಿಗಂತ್ಗೆ ಜೋಡಿಯಾಗಿ ನಟಿಸುತ್ತಿದ್ದು, ರಾಧಿಕಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎಡಗೈ ಆಧಾರಿತ ಪರಿಕಲ್ಪನೆ ಸಿನಿಮಾವಾಗಿರೋದ್ರಿಂದ ಈ ಪಾತ್ರ ತಮಗೆ ವಿಶೇಷವಾಗಿದ್ದು, ಡಿಫರೆಂಟ್ ಶೇಡ್ನಲ್ಲಿ ಕಾಣಿಸಿಕೊಳ್ಳುವುದಾಗಿ ಧನು ಹರ್ಷ ಹೇಳಿದ್ದಾರೆ.
ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆ ಆಧರಿಸಿರೋ ಚಿತ್ರಕ್ಕೆ ಸಮರ್ಥ್ ಬಿ. ಕಡ್ಕೋಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ವಿಶೇಷ ಏನೆಂದರೆ, ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಎಡಗೈ ಬಳಕೆದಾರರ ಸಂಖ್ಯೆ ಬಹಳ ಕಡಿಮೆ ಇದೆ. ಇದರಿಂದ ಅವರಿಗೆ ಒಂದಷ್ಟು ತೊಂದರೆಗಳು ಆಗುತ್ತಿವೆ. ಅದರ ಬಗೆಗಿನ ಕಥೆ ಇದಾಗಿದೆ.
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನಿರ್ದೇಶನ ಮಾಡಿದ್ದ, ಗುರುದತ್ತ ಗಾಣಿಗ ಮತ್ತು ಸಮರ್ಥ ಕಡ್ಕೋಳ್ ಜಂಟಿಯಾಗಿ ಈ ಸಿನಿಮಾನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣವಿದೆ. ರಾಹುಲ್ ವಿ, ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಬರೆದಿದ್ದಾರೆ. ಇದೇ ತಿಂಗಳಿನಿಂದ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಚಿತ್ರೀಕರಣ ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ದಿಗಂತ್ ಅವರ ವೃತ್ತಿಜೀವನದಲ್ಲಿ ಇದೊಂದು ಭಿನ್ನ ಸಿನಿಮಾ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ : ಅಪ್ಪುನನ್ನು ಪ್ರೀತಿಸುತ್ತಿದ್ದೆವು, ಇನ್ಮುಂದೆ ಪೂಜಿಸಬೇಕು: ನಟ ರಾಘವೇಂದ್ರ ರಾಜ್ಕುಮಾರ್