ಆತ ಒಳ್ಳೆಯವನೋ. ಕೆಟ್ಟವನೋ.. ಜಡ್ಜ್ಮೆಂಟ್ಗೆ ಸಿಗವಲ್ದು.. ಆದರೆ ಮಂದಿಗೆ ಬಾಳ ಫೇವರೆಟ್ ಇದಾನ. ಇದು ಹೊಯ್ಸಳ ಸಿನಿಮಾದ ಟೀಸರ್ ನಲ್ಲಿ ಮೈನೆರೇಳಿಸುವ ಡೈಲಾಗ್. ನಟ ರಾಕ್ಷಸ ಧನಂಜಯ್ ಅಭಿನಯದ 25ನೇ ಸಿನಿಮಾ ಹೊಯ್ಸಳ. ಬಹುತೇಕ ಶೂಟಿಂಗ್ ಮುಗಿಸಿ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಡೇಟ್ ಅನೌಸ್ ಆಗಿರುವ ಹೊಯ್ಸಳ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು ಡೈಲಾಗ್ ಫೇಮಸ್ ಆಗುತ್ತಿದೆ.
ಈ ಡೈಲಾಗ್ ನಟ ಅಚ್ಯುತ್ ಕುಮಾರ್ ಅವರ ಧ್ವನಿ ಹಿಂದೆ ಕೇಳುತ್ತಿದ್ದರೆ, ಮುಂದೆ ಹಾಲು..ರಕ್ತ..ಬೆಂಕಿಯ ಅಭಿಷೇಕ ಮಾಡಿಕೊಂಡೇ, ಕುದುರೆ ಏರಿ ಬರುವ ಧನಂಜಯ್ ನಿಜಕ್ಕೂ ಹೊಯ್ಸಳದ ಗುರುದೇವ್ ಆಗಿ ಮಿಂಚಿದ್ದಾರೆ. ಯಾವುದೋ ಗಲಾಟೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಅಧಿಕಾರಿಯ ಹೋರಾಟದ ದೃಶ್ಯಗಳನ್ನು ಟೀಸರಿನಲ್ಲಿ ತೋರಿಸಲಾಗಿದೆ.
ಬೆಳಗಾವಿಯ ಅಥಣಿಯಲ್ಲಿ ನಡೆಯುವ ಕಥೆ ಇದು. ಅಂದಹಾಗೆ ಇದು ಡಾಲಿಯ 25ನೇ ಸಿನಿಮಾ ಎನ್ನುವುದೇ ವಿಶೇಷ. ಇನ್ನೊಂದು ವಿಶೇಷ ಎಂದರೆ ನೋಡುಗರ ಹೃದಯಲ್ಲಿ ಕಿಚ್ಚು ಹಚ್ಚಿದ ಹೊಯ್ಸಳ ಟೀಸರ್ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್. ಟೀಸರ್ ದೃಶ್ಯ ನೋಡುತ್ತಿದ್ದರೆ ಬೆಳಗಾವಿ ಗಡಿಭಾಗದ ಮರಾಠಿ ಮತ್ತು ಕನ್ನಡ ಸಂಘರ್ಷದ ಕಥೆ ಅನ್ನೋದು ಗೊತ್ತಾಗುತ್ತೆ.
- " class="align-text-top noRightClick twitterSection" data="">
ಈ ಹಿಂದೆ ಗಣೇಶ್ ನಟನೆಯ ಗೀತಾ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾದ ಬಳಿಕ ಧನಂಜಯ್ ಜೊತೆ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಸದ್ಯ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರೀಯಲ್ಲಿ ದಾಪುಗಾಲು ಇಡುತ್ತಿರುವ ಕೆಆರ್ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನವಿದೆ. ವಿಶ್ವಾಸ್ ಕಶ್ಯಪ್ ಅವರು ಕಲಾ ನಿರ್ದೇಶಕರಾಗಿದ್ದು ಮಾಸ್ತಿ ಸಂಭಾಷಣೆ ಬರೆದಿದ್ದಾರೆ.
ಸದ್ಯ ಟೀಸರ್ ನಿಂದಲೇ ದಕ್ಷಿಣ ಭಾರತದಲ್ಲಿ ಟಾಕ್ ಆಗುತ್ತಿರುವ ಹೊಯ್ಸಳ ಸಿನಿಮಾ ನೋಡುಗರಲ್ಲಿ ಈ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಜಾಸ್ತಿ ಮಾಡಿದೆ. ಮತ್ತೊಂದು ಕಡೆ ಬಡವ ರಾಸ್ಕಲ್ ಬಳಿಕ ಸಕ್ಸಸ್ ಗಾಗಿ ಎದುರು ನೋಡುತ್ತಿರುವ ಧನಂಜಯ್ಗೆ ಹೊಯ್ಸಳ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಸಿಗುವ ಲಕ್ಷಣಗಳು ಕಾಣ್ತಾ ಇದೆ. ಆ ನಿರೀಕ್ಷೆಯಂತೆ ಮಾರ್ಚ್ 30ರಂದು ರಾಜ್ಯ ಅಲ್ಲದೇ, ವಿಶ್ವಾದ್ಯಂತ ಹೊಯ್ಸಳ ಬಿಡುಗಡೆ ಆಗಲಿದ್ದು ಡಾಲಿ ಎದೆಯಲ್ಲಿ ಢವ ಢವ ಶುರುವಾಗಿದೆ.
ಕನ್ನಡ ಸಿನಿಮಾ ರಂಗಕ್ಕೆ ಡಾಲಿ ಎಂಬ ರೌಡಿಯಾಗಿ ಪ್ರಖ್ಯಾತರಾದ ಧನಂಜಯ್ ಎರಡನೇ ಬಾರಿಗೆ ಪೊಲೀಸ್ ವೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ದುನಿಯಾ ವಿಜಯ್ ಅವರ ಸಲಗ ಚಿತ್ರದಲ್ಲಿ ಖಡಕ್ ಕಾಪ್ ಆಗಿ ಮಿಂಚಿದ್ದರು. ಈಗ ಮತ್ತೆ 25 ನೇ ಸಿನಿಮಾದಲ್ಲಿ ಸಂಪೂರ್ಣ ಪೊಲೀಸ್ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದು, ನಟ ರಾಕ್ಷಸನ ಅಭಿಮಾನಿಗಳ ಕಣ್ಣಿಗೆ ಹಬ್ಬವೇ ಕಾದಿದೆ ಎಂದರೆ ತಪ್ಪಾಗದು.
ಇದನ್ನೂ ಓದಿ: ಡಾಲಿ ಅಭಿನಯನದ 'ಹೊಯ್ಸಳ' ಚಿತ್ರದ ಟೀಸರ್ ಅನಾವರಣಕ್ಕೆ ಡೇಟ್ ಫಿಕ್ಸ್