ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ಆರೋಪಿಯಾಗಿರುವ 200 ಕೋಟಿ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಅರ್ಜಿಯನ್ನು ಡಿ. 20ರವರೆಗೆ ದೆಹಲಿ ಹೈ ಕೋರ್ಟ್ ಮುಂದೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಪೊಲೀಸರು ಚಂದ್ರಶೇಖರ್ ಅವರಿಗೆ ಫರ್ನಾಂಡಿಸ್ ಪರಿಚಯ ಮಾಡಿಕೊಟ್ಟ ಸಹಚರ ಪಿಂಕಿ ಇರಾನಿ ಅವರನ್ನು ಬಂಧಿಸಿದ್ದಾರೆ
ಈ ಪ್ರಕರಣ ಸಂಬಂಧಿಸಿದಂತೆ ದೆಹಲಿ ಹೈ ಕೋರ್ಟ್ ವಂಚಕ ಸುಕೇಶ್ ಚಂದ್ರಶೇಖರ್ ಹೆಂಡತಿ ಲೀನಾ ಮರಿಯಾ ಪೌಲಸ್ಗೆ ಜಾಮೀನು ಪ್ರಕರಣ ಸಂಬಂಧ ಪೊಲೀಸರಿಗೆ ಸೂಚನೆ ಕೂಡಾ ನೀಡಿದೆ. ಆರ್ಥಿಕ ಅಪರಾಧಗಳ ತನಿಖಾ ವಿಭಾಗ ಕಳೆದ ವರ್ಷ ಸುಕೇಶ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದೆ.
ಪ್ರಕರಣ ಸಂಬಂಧ ಚಂದ್ರಶೇಖರ್, ಪೌಲಸ್ ಮತ್ತಿತ್ತರ 14 ಆರೋಪಿಗಳ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಅಡಿ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಚಂದ್ರಶೇಖರ್ ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಪತ್ನಿಯರಿಗೆ 200 ಕೋಟಿ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಎಂದು ಹೇಳಿಕೊಂಡು ಅವರ ಪತಿಯಂದಿರಿಗೆ ಜಾಮೀನು ನೀಡುವುದಾಗಿ ಭರವಸೆ ನೀಡಿ ಅವರ ಪತ್ನಿಯರಾದ ಅದಿತಿ ಸಿಂಗ್ ಮತ್ತು ಜಪ್ನಾ ಸಿಂಗ್ ಅವರಿಂದ ಹಲವಾರು ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ ಎಂಬ ಆರೋಪ ಸುಕೇಶ್ ಮೇಲಿದೆ.
ಇದನ್ನೂ ಓದಿ: ಜಾಮೀನು ಕೋರಿದ ವಂಚಕ ಸುಕೇಶ್ ಪತ್ನಿ: ಪ್ರತಿಕ್ರಿಯೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ