ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ 'ಕಾಟೇರ' ಡಿಸೆಂಬರ್ 29ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಡಿಸೆಂಬರ್ 16ರಂದು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಟ್ರೇಲರ್ ಬಿಡುಗಡೆ ಮಾಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಿನಿಮಾ ಸೆಲೆಬ್ರಿಟಿಗಳು, ಚಿತ್ರತಂಡವರು ಭಾಗಿಯಾಗಿದ್ದರು.
'ಕಾಟೇರ' 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾಗಿರುವ ಸಿನಿಮಾ. ಟ್ರೇಲರ್‌ನಲ್ಲಿ ದರ್ಶನ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರೈತರಿಗೆ ಅನ್ಯಾಯವಾದಾಗ ಸಿಡಿದೇಳುವ ಯೋಧನಾಗಿ, ಅನ್ಯಾಯದ ವಿರುದ್ಧ ಹೋರಾಡುವ ನಾಯಕನಾಗಿ ಮಿಂಚಿದ್ದಾರೆ. ಯೂಟ್ಯೂಬ್ನಲ್ಲಿ ಟ್ರೇಲರ್‌ಗೆ ಕಳೆದ 17 ಗಂಟೆಗಳ ಅವಧಿಯಲ್ಲಿ 66 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದೆ.
- " class="align-text-top noRightClick twitterSection" data="">
ಇತ್ತೀಚೆಗೆ ರಿಲೀಸ್ ಆಗಿರುವ ಚಿತ್ರದ 'ಯಾವ ಜನುಮದ ಗೆಳತಿ' ಹಾಡಿಗೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ ಹಾಡಿಗೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಹೇಮಂತ್ ಕುಮಾರ್ ಮತ್ತು ರಕ್ಷಿತಾ ಸುರೇಶ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಆನಂದ್ ಯೂಟ್ಯೂಬ್ನಲ್ಲಿ ರಿಲೀಸ್ ಆಗಿದ್ದು ಈವರೆಗೆ 6 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
'ಕ್ರಾಂತಿ' ಸಿನಿಮಾದ ಬಳಿಕ ದರ್ಶನ್ ಅಭಿನಯಿಸುತ್ತಿರುವ ಸಿನಿಮಾವೇ 'ಕಾಟೇರ'. ಪೋಸ್ಟರ್ ಬಿಡುಗಡೆಯಾದಾಗಿನಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಈ ಹಿಂದೆ 'ಕಾಟೇರ' ಚಿತ್ರದ ಅನೌನ್ಸ್ಮೆಂಟ್ ವಿಡಿಯೋದಲ್ಲೂ ದರ್ಶನ್ ಲುಕ್ನ ಸಣ್ಣ ಝಲಕ್ ಅನ್ನು ಚಿತ್ರತಂಡ ರಿವೀಲ್ ಮಾಡಿತ್ತು.
ಮಾಲಾಶ್ರೀ ಮಗಳು ಆರಾಧನಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಹಿರಿಯ ನಟರಾದ ಬಿರಾದಾರ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್, ಸೈಫಿ ಜಗಪತಿ ಬಾಬು ಮತ್ತು ಕುಮಾರ್ ಗೋವಿಂದ್, ಶೃತಿ, ಅವಿನಾಶ್ ಸೇರಿದಂತೆ ದೊಡ್ಡ ತಾರಾಗಣವಿದೆ.
'ರಾಬರ್ಟ್' ಬಳಿಕ ತರುಣ್ ಸುಧೀರ್ ಮತ್ತೆ ದರ್ಶನ್ ಅವರಿಗೆ ಆ್ಯಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾವಿದು. ಮಾಸ್ತಿ ಸಂಭಾಷಣೆ ಬರೆದಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಧಾಕರ್ ಎಸ್.ರಾಜ್ ಛಾಯಾಗ್ರಹಣವಿದೆ. ರಾಕ್‌ಲೈನ್ ವೆಂಕಟೇಶ್ ತಮ್ಮದೇ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವ 'ಕಾಟೇರ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ.
ಇದನ್ನೂ ಓದಿ: ದೀಪಾವಳಿ ಸಂಭ್ರಮ: ಮಾಲಾಶ್ರೀ ಜೊತೆ ಮಗಳು ಆರಾಧನಾ ಫೋಟೋಶೂಟ್