ಬೆಂಗಳೂರು: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿವಾದಿತ ಪೋಸ್ಟ್ ಮಾಡಿರುವ ಆರೋಪ ಪ್ರಕರಣದಲ್ಲಿ ನಟ ಚೇತನ್ ಅಹಿಂಸಾ ಅವರನ್ನು ಶೇಷಾದ್ರಿಪುರಂ ಪೊಲೀಸರು ಇಂದು ಬಂಧಿಸಿದ್ದಾರೆ. ಎಸಿಎಂಎಂ ಕೋರ್ಟ್‌ಗೆ ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು ಹಾಜರುಪಡಿಸಲಾಗಿದ್ದು, ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧನಕ್ಕೆ ಒಳಗಾಗಿರುವ ನಟ ಚೇತನ್ ಪರ ವಕೀಲರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಬಂಧನ ಪ್ರಕರಣ ಸಂಬಂಧ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ಅವರನ್ನು 32ನೇ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ವಾದ ಮಂಡಿಸಿದ ಚೇತನ್ ಪರ ವಕೀಲ ಸುನೀಲ್ ಕುಮಾರ್ ಗುನ್ನಾಪುರ, ಫೇಸ್ ಬುಕ್‌ನಲ್ಲಿ ಆ ಬರಹಗಳನ್ನು ನನ್ನ ಕಕ್ಷಿದಾರರೇ ಬರೆದಿದ್ದಾರೆ ಎಂಬುದಕ್ಕೆ ಸಾಕ್ಷಿ ಇಲ್ಲ. ಪೊಲೀಸರು ಸುಳ್ಳು ಕೇಸ್ ಹಾಕಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಧರ್ಮ ಧರ್ಮಗಳ ನಡುವೆ ಕೋಮುಭಾವನೆ ಕೆರಳಿಸುವಂತಹ ಬರಹ ಪೋಸ್ಟ್ ಮಾಡಿದ್ದಾರೆ. ಐಪಿಸಿ ಸೆಕ್ಷನ್ 295 (ಎ) ಜಾಮೀನು ರಹಿತ ವಾರೆಂಟ್ ಇದಾಗಿದೆ. ಜಾಮೀನು ಮಂಜೂರು ಮಾಡದಂತೆ ವಾದ ಮಂಡಿಸಿದರು. ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯ ಚೇತನ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಳಿಸಿ ಮಾರ್ಚ್ 23ಕ್ಕೆ ಅರ್ಜಿ ವಿಚಾರಣೆ ಮುಂದೂಡಿತು.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ವಕೀಲ ಸುನೀಲ್ ಕುಮಾರ್, ಸೋಶಿಯಲ್ ಮೀಡಿಯಾ ಪೋಸ್ಟ್ ವಿಚಾರವಾಗಿ ನಟ ಚೇತನ್ ಅವರನ್ನು ಬಂಧಿಸಿರುವುದು ಕಾನೂನು ಬಾಹಿರ. ಬಂಧನಕ್ಕೂ ಮುನ್ನ ಆರೋಪಿಗೆ ಸಿಆರ್ಪಿಸಿ 41ರಡಿ ನೋಟಿಸ್ ನೀಡಿದ್ದ ಪೊಲೀಸರು, ಕುಟುಂಬಸ್ಥರಿಗೆ ಮಾಹಿತಿ ನೀಡದೇ ಬಂಧಿಸಿದ್ದಾರೆ. ಕೋಮುಭಾವನೆ ಕೆರಳಿಸುವಂತಹ ಪೋಸ್ಟ್ ಮಾಡಿಲ್ಲ. ಅಲ್ಲದೇ ಪೋಸ್ಟ್ ಚೇತನ್ ಬರೆದಿದ್ದಾರೆ ಎಂಬುದಕ್ಕೆ ಸಾಕ್ಷಿ ಇಲ್ಲ. ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಯೊಂದಿಗೆ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಈ ಸಂಬಂಧ ನ್ಯಾಯಾಲಯ ಮಾರ್ಚ್ 23ಕ್ಕೆ ವಿಚಾರಣೆ ಮುಂದೂಡಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳು: ರಾಮ್ ಚರಣ್ ನಂಬರ್ 1, ಎರಡನೇ ಸ್ಥಾನದಲ್ಲಿ ದೀಪಿಕಾ
ಪ್ರಕರಣ: ಚೇತನ್ ಅವರು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಜಾತಿಗಳ ನಡುವೆ ವೈಮನಸ್ಸು ಉಂಟು ಮಾಡಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ. ಸಮಾಜದ ಶಾಂತಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಯಿಂದ ವಿವಿಧ ಕೋಮುಗಳ ನಡುವೆ ಘರ್ಷಣೆಗೆ ಪ್ರೇರಣೆ ನೀಡಿರುವ ಚೇತನ್ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಶಿವಕುಮಾರ್ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
ಹಿಂದೂಗಳ ಭಾವನೆಗೆ ಧಕ್ಕೆ ತರುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಎಂದು ಹಿಂದೂಪರ ಕಾರ್ಯಕರ್ತ ಶಿವಕುಮಾರ್ ಎಂಬುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅವರ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ, ಇಂದು ಬೆಳಗ್ಗೆ ಚೇತನ್ ಅವರನ್ನು ಬಂಧಿಸಿ, ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.