ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ಮಿಸುತ್ತಾ ತನ್ನದೇ ಆದ ಬೇಡಿಕೆ ಹೊಂದಿರುವ ನಟ ವಿಜಯ ರಾಘವೇಂದ್ರ. ಇದೀಗ ವಿನೂತನ ಕಥಾ ಹಂದರದ 'ಕೇಸ್ ಆಫ್ ಕೊಂಡಾಣ' ಎಂಬ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ.
ಚಿತ್ರಕಥೆ ಸಂಪೂರ್ಣವಾಗಿ ಬೆಂಗಳೂರಿನಲ್ಲೇ ನಡೆಯುತ್ತದೆ. ಆರಂಭದ ಮೂರು ಕಥೆಗಳೊಂದಿಗೆ ಪ್ರಯಾಣ ಮುಂದುವರಿಸುತ್ತಾ, ಕೊನೆಯಲ್ಲಿ ಹೇಗೆ ಎಲ್ಲವೂ ಒಂದೆಡೆ ಸೇರುತ್ತವೆ ಎನ್ನುವುದು ಕುತೂಹಲಕಾರಿಯಾಗಿದೆ. ಚಿತ್ರದ ಶೇ.80ರಷ್ಟು ಭಾಗ ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಸುತ್ತ ಸುತ್ತುತ್ತದೆ. ಕೊಂಡಾಣ ಎನ್ನುವ ಕಾಲ್ಪನಿಕ ಸ್ಥಳದಲ್ಲಿ ಆ ರಾತ್ರಿ ನಡೆಯುವ ಘಟನೆ ಏನು ಎಂಬ ಪ್ರಶ್ನೆಗಳಿಗೆ ಜನವರಿ 26ರಂದು ಉತ್ತರ ಸಿಗಲಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ ರಾಘವೇಂದ್ರ ಪ್ರೇಕ್ಷಕರೆದುರು ಬರುತ್ತಿದ್ದಾರಂತೆ.
ಖುಷಿ ರವಿ, ರಂಗಾಯಣ ರಘು ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ. ಸೀತಾ ರಾಮ್ ಬಿನೋಯ್ ಅವರ ಜೊತೆ ಕೆಲಸ ಮಾಡಿರುವ ಟೆಕ್ನಿಷಿಯನ್ ಇಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಗನ್ ಬಡೇರಿಯಾ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯದ ಚಿತ್ರಕ್ಕೆ ಜೋಗಿ ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ದೇವಿಪ್ರಸಾದ್ ಶೆಟ್ಟಿ ಸಾತ್ವಿಕ್ ಹೆಬ್ಬಾರ್ ಜತೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.
ಜೋಗ್ 101 ಸದ್ಯದಲ್ಲೇ ತೆರೆಗೆ: ವಿಜಯ ರಾಘವೇಂದ್ರ ಒಂದಾದ ಮೇಲೊಂದಂತೆ ಸಿನಿಮಾ ಮಾಡುತ್ತಲೇ ಇರುತ್ತಾರೆ. ಇದಕ್ಕೂ ಮುನ್ನ, ರಾಘು ಎಂಬ ವಿಭಿನ್ನ ಕಂಟೆಂಟ್ ಹೊಂದಿದ್ದ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಮೇಲೆ ಜೋಗ್ 101 ಶೀರ್ಷಿಕೆಯುಳ್ಳ ಸಿನಿಮಾ ಮಾಡುತ್ತಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರದ ಚಿತ್ರದ ಫಸ್ಟ್ ಲುಕ್ ಕಳೆದ ಆಗಸ್ಟ್ನಲ್ಲೇ ಬಿಡುಗಡೆಯಾಗಿತ್ತು. ಸೆವೆನ್ ಸ್ಟಾರ್ ಪಿಕ್ಚರ್ಸ್ ಲಾಂಛನದಲ್ಲಿ ರಘು (ರಾಘವೇಂದ್ರ ) ಚಿತ್ರ ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯ್ ಕನ್ನಡಿಗ ಚಿತ್ರದ ನಿರ್ದೇಶಕರು. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ಪ್ಲಾನ್ ಮಾಡುತ್ತಿದೆ.