ಪ್ರಿಮಿಯರ್ ಪದ್ಮಿನಿ ಹಾಗು ರತ್ನನ್ ಪ್ರಪಂಚ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರವಸೆ ಹುಟ್ಟಿಸಿರುವ ಪ್ರತಿಭಾನ್ವಿತ ನಟ ಪ್ರಮೋದ್. ಸದ್ಯ ಬಾಂಡ್ ರವಿ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಶೇ 70 ಶೂಟಿಂಗ್ ಈಗಾಗಲೇ ಮುಗಿದಿದೆ.
ಇತ್ತೀಚೆಗೆ ಬೆಂಗಳೂರಿನ ಹೆಚ್ಎಮ್ಟಿಯ ಕಾಡಿನಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಸಲಾಗಿದೆ. ಖ್ಯಾತ ಸಾಹಸ ನಿರ್ದೇಶಕ ಮಾಸ್ಟರ್ ವಿನೋದ್ ಸಂಯೋಜನೆಯಲ್ಲಿ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ಪ್ರಮೋದ್, ಸಹಕಲಾವಿದರು ಆ್ಯಕ್ಷನ್ ಸೀನ್ಸ್ನಲ್ಲಿ ಭಾಗಿಯಾಗಿದ್ದರು.
ಕಳೆದ ಹನ್ನೊಂದು ವರ್ಷದಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಕಮರ್ಷಿಯಲ್, ಆ್ಯಕ್ಷನ್-ಲವ್ ಸ್ಟೋರಿ ಸಿನಿಮಾ. ಪ್ರಮೋದ್‌ಗೆ ನಾಯಕಿಯಾಗಿ ಮಾಯಕನ್ನಡಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ನಟಿಸ್ತಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ತೆಲುಗಿನ ನಟ ರವಿ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಚಿತ್ರದಲ್ಲಿದೆ.
ಇದನ್ನೂ ಓದಿ: 60ರ ದಶಕದ ಬೆಂಗಳೂರಿನಲ್ಲಿ ನಡೆಯುವ ಕಥೆ ಹೇಳಲು ಬರುತ್ತಿದೆ 'ಆಚಾರ್ & ಕೋ'
ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ಅಡಿ ನರಸಿಂಹಮೂರ್ತಿ ಬಂಡವಾಳ ಹೂಡಿದ್ದಾರೆ. ಈ ಹಿಂದೆ ನರಸಿಂಹಮೂರ್ತಿ ಮಾದ ಮನಸಿ ಸಿನಿಮಾ ನಿರ್ಮಿಸಿದ್ದರು. ಕೆಎಸ್.ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಸಂಕಲನ, ಸುನಿಲ್ ಮತ್ತು ದೇವ್ ಎನ್.ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ, ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.