ಕನ್ನಡ ಚಿತ್ರರಂಗದಲ್ಲಿ ಫ್ರೆಂಚ್ ಬಿರಿಯಾನಿ, ಗುರು ಶಿಷ್ಯರು ಚಿತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನಗೆದ್ದಿರುವ ನಟ ಮಹಾಂತೇಶ್ ಹಿರೇಮಠ್. ಈ ಚಿತ್ರಗಳ ಯಶಸ್ಸಿನಿಂದಾಗಿ ಮಹಾಂತೇಶ್ ಅವರೀಗ 'ಅರಸಯ್ಯನ ಪ್ರೇಮಪ್ರಸಂಗ' ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡೊಂದು ಅನಾವರಣಗೊಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಕೃಷ್ಣ ರಿತ್ತಿ ಬರೆದಿರುವ "ಅಯ್ಯಯ್ಯೋ ರಾಮ" ಹಾಡು ಬಿಡುಗಡೆಯಾಗಿದೆ. ಪ್ರವೀಣ್ - ಪ್ರದೀಪ್ ಸಂಗೀತ ನೀಡಿದ್ದಾರೆ. ಶಂಕರ್ ಭಾರತಿಪುರ ಹಾಡಿದ್ದಾರೆ. ಗ್ರಾಮೀಣ ಸೊಗಡಿನ ಈ ಹಾಡು ಎ2 ಮ್ಯೂಸಿಕ್ ಮೂಲಕ ಬಿಡುಗಡೆ ಆಗಿದೆ. ಈ ಹಾಡನ್ನು ನಟ ನವೀನ್ ಶಂಕರ್ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಜೆ ವಿ ಆರ್ ದೀಪು ಮಾತನಾಡಿ, ನಾನು ಅಭಿನಯ ತರಂಗದಲ್ಲಿ ನಟನೆ ಹಾಗೂ ನಿರ್ದೇಶನದ ತರಬೇತಿ ಪಡೆದಿದ್ದೇನೆ. ನಿರ್ಮಾಪಕ ರಾಜೇಶ್ ಸಹ ಅಭಿನಯ ತರಂಗದ ವಿದ್ಯಾರ್ಥಿ ಆಗಿದ್ದರು. ಈ ಚಿತ್ರದ ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು. ಇದೊಂದು ಕಾಮಿಡಿ ಡ್ರಾಮಾ ಎನ್ನಬಹುದು. ಹಾಡಿನ ಬಗ್ಗೆ ಹೇಳಬೇಕೆಂದರೆ, ಹಳ್ಳಿಗಳಲ್ಲಿ ಯಾರಾದರೂ ಮೃತಪಟ್ಟರೆ ರಾತ್ರಿ ಭಜನೆ ಮಾಡುತ್ತಾರೆ. ಆ ರೀತಿ ನಮ್ಮ ಚಿತ್ರದಲ್ಲೂ ಬರುವ ಒಂದು ಪ್ರಸಂಗದಲ್ಲಿ ಈ ಹಾಡು ಬರುತ್ತದೆ. ಪ್ರವೀಣ್ - ಪ್ರದೀಪ್ ಸಂಗೀತದಲ್ಲಿ, ಶಂಕರ್ ಭಾರತಿಪುರ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿದೆ ಎಂದು ತಿಳಿಸಿದರು.
ನಿರ್ಮಾಪಕ ರಾಜೇಶ್ ಮಾತನಾಡಿ, ನಾನು ಕೂಡ ಅಭಿನಯ ತರಂಗದ ವಿದ್ಯಾರ್ಥಿ. ನಿರ್ದೇಶಕ ದೀಪು ಈ ಕಥೆ ಹೇಳಿದಾಗ, ಗ್ರಾಮೀಣ ಸೊಗಡಿನ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ನನ್ನ ಪತ್ನಿ ಮೇಘಶ್ರೀ ರಾಜೇಶ್ ಈ ಚಿತ್ರದ ನಿರ್ಮಾಪಕಿ ಎಂದು ಮಾಹಿತಿ ಕೊಟ್ಟರು.
ಇದನ್ನೂ ಓದಿ: ಚಂದನ್ ಶೆಟ್ಟಿ ಹೊಸಹೆಜ್ಜೆ 'ನಾದಯೋಗಿ': ನಿಮ್ ವಿಡಿಯೋ ಇಲ್ಲಿ ಬರಬೇಕೇ? ಹೀಗೆ ಮಾಡಿ
ಇನ್ನು ತಮ್ಮ ಉದ್ದ ಕೂದಲಿನಿಂದಲೇ ಗಮನ ಸೆಳೆಯುತ್ತಿರುವ ಮಹಾಂತೇಶ್ ಹಿರೇಮಠ್ ಅವರು ನಾನು ನಾಯಕ ಎಂದು ಎಂದಿಗೂ ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ಪೋಷಕ ನಟನಾಗಿರುವುದಕ್ಕೆ ಇಷ್ಟಪಡುತ್ತೇನೆ. ನಿರ್ಮಾಪಕರು, ನಿರ್ದೇಶಕರು ನೀನೇ ಈ ಚಿತ್ರದ ನಾಯಕ ಎಂದಾಗ ಆಶ್ಚರ್ಯವಾಯಿತು. ದೀಪು ಹಳ್ಳಿಸೊಗಡಿನ ಅದ್ಭುತ ಕಥೆ ಆಯ್ಕೆ ಮಾಡಿಕೊಂಡು, ಅಷ್ಟೇ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರುವ ಹಾಡು ಕೂಡ ಜನಪ್ರಿಯವಾಗಲಿದೆ. ಚಿತ್ರ ಕೂಡ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ತಿಳಿಸಿದರು.
- " class="align-text-top noRightClick twitterSection" data="">
ಇದನ್ನೂ ಓದಿ: 'ಕರ್ನಾಟಕದ ಅಳಿಯ' ಸಿನಿಮಾ ಹಾಡು ಮೆಚ್ಚಿದ 'ಮುದ್ದಿನ ಅಳಿಯ'
ಚಿತ್ರದಲ್ಲಿ ನಾಯಕಿ ರಶ್ಮಿತಾ ಗೌಡ, ಉಳಿದಂತೆ ವಿಜಯ್ ಚೆಂಡೂರ್, ರಘು ರಾಮನಕೊಪ್ಪ, ಪಿ.ಡಿ. ಸತೀಶ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಛಾಯಾಗ್ರಾಹಕ ಗುರುಪ್ರಸಾದ್ ನರ್ನಾಡ್, ಸಂಕಲನಕಾರ ಸುನೀಲ್ ಕಶ್ಯಪ್ ಸೇರಿದಂತೆ ಮುಂತಾದ ತಂತ್ರಜ್ಞರು ಇದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲಿದ್ದೇವೆ ಎಂದು ನಿರ್ಮಾಪಕರು ಮಾಹಿತಿ ಹಂಚಿಕೊಂಡರು.