ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಚಿತ್ರರಂಗದ ಏಳಿಗೆ ಸಂಬಂಧ ಕೆಲ ಯೋಜನೆಗಳನ್ನು ಕೈಗೊಂಡಿದ್ದಾರೆ. ಸಿನಿಮಾ ರಂಗದ ಬೇಡಿಕೆಗಳನ್ನು ಈಗಾಗಲೇ ಚಿತ್ರಮಂಡಳಿ ವತಿಯಿಂದ ಸಿಎಂ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿತ್ತು.
ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಲು ಎರಡನೇ ಹಂತದ ನಗರಗಳಲ್ಲಿ 100 ರಿಂದ 200 ಆಸನಗಳ ಮಿನಿ ಚಿತ್ರಮಂದಿರಗಳ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ, ಅನೇಕ ಅಭಿಮಾನಿಗಳನ್ನು ಸಂಪಾದಿಸಿ ಇಹಲೋಕ ತ್ಯಜಿಸಿರುವ ದಿವಂಗತ ಶಂಕರ್ ನಾಗ್ ಹೆಸರಲ್ಲಿ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣದ ಬಗ್ಗೆ ಘೋಷಣೆ ಮಾಡಲಾಗಿದೆ.
ಕನ್ನಡ ಸಂಸ್ಕೃತಿ ಉಳಿಸುವ ಜೊತೆಗೆ ಅಭಿವೃದ್ಧಿಪಡಿಸುವ ಸಲುವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಅಕಾಡೆಮಿ, ಯಕ್ಷರಂಗಾಯಣ ಸ್ಥಾಪಿಸಲಾಗುವುದು. ಜೊತೆಗೆ ಶ್ರೀ ಭುವನೇಶ್ವರಿ ದೇವಿಯ ಬೃಹತ್ ಮೂರ್ತಿ ಮತ್ತು ಥೀಮ್ ಪಾರ್ಕ್ ಅನ್ನು ನಿರ್ಮಿಸಿ ಅಭಿವೃದ್ಧಿಪಡಿಸಲಾಗುವುದು.
'ಜಾನಪದ ಹಬ್ಬ': 'ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ' ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಎಲ್ಲ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ 'ಜಾನಪದ ಹಬ್ಬ' ಆಯೋಜನೆ ಮಾಡಲಾಗುವುದು. ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಸನಕ್ಕೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ಕನ್ನಡವೇ ಸಾರ್ವಭೌಮ: ಗಡಿನಾಡು ಪ್ರದೇಶಗಳಲ್ಲಿ ನಮ್ಮ ಭಾಷೆ ಕನ್ನಡವೇ ಸಾರ್ವಭೌಮ, ಭಾಷಾ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. ಗಡಿನಾಡಿನಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪ್ರಾಶಸ್ತ್ಯ ನೀಡಲು ಹಾಗೂ ಗಡಿ ಪ್ರದೇಶಗಳ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಚಿತ್ರರಂಗದ ನಿರೀಕ್ಷೆ ಏನಿತ್ತು? ಬಜೆಟ್ ಘೋಷಣೆಗೂ ಮುನ್ನ ಈಟಿವಿ ಭಾರತದೊಂದಿಗೆ ಮಾತನಾಡಿದ್ದ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್, ''ಕಳೆದ ವರ್ಷ ಫಿಲ್ಮ್ ಸಿಟಿ ನಿರ್ಮಾಣದ ಬಗ್ಗೆ ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿತ್ತು. ಆದರೆ, ಅದು ಈವರೆಗೂ ಕಾರ್ಯಗತ ಆಗಿಲ್ಲ. ಈ ಬಜೆಟ್ನಲ್ಲಿ ಫಿಲ್ಮ್ ಸಿಟಿ ಎಲ್ಲಿ ನಿರ್ಮಾಣ ಆಗಬೇಕು ಅನ್ನೋದು ಗೊತ್ತಾಗಲಿದೆ. ಜೊತೆಗೆ ಕನ್ನಡ ಚಿತ್ರರಂಗದ ಸಿನಿಮಾಗಳು ವಿಶ್ವವ್ಯಾಪಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಸಮಾಜವಾದಿ ಮುಖಂಡ ಫಹಾದ್ ಅಹ್ಮದ್ ಜೊತೆ ಸ್ವರಾ ಭಾಸ್ಕರ್ ಗಪ್ ಚುಪ್ ಶಾದಿ: ವಿಡಿಯೋ ಹಂಚಿಕೊಂಡ ನಟಿ
ಚಿತ್ರೋದ್ಯಮಕ್ಕೆ ಒಂದು ಸಮುದಾಯ ಭವನ ಕಟ್ಟಿಸಿ ಕೊಡುವಂತೆ, ಸಿನಿಮಾಗಳ ಮೇಲೆ ರಾಜ್ಯ ಹಾಗು ಕೇಂದ್ರ ಸರ್ಕಾರ ಹಾಕುತ್ತಿರುವ ತೆರಿಗೆ ಕಡಿಮೆ ಮಾಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಈಗಾಗಲೇ ಚಿತ್ರೋದ್ಯಮದ ಏಳಿಗೆಗೆ ಸಿಎಂ ಸಾಕಷ್ಟು ಕೆಲಸಗಳನ್ನು ಮಾಡಿ ಕೊಡ್ತಾ ಇದ್ದಾರೆ. ಆದ್ರೆ ಎಲ್ಲದಕ್ಕಿಂತ ಪ್ರಮುಖವಾಗಿ ಫಿಲ್ಮ್ ಸಿಟಿ ನಿರ್ಮಿಸೋಕೆ ಜಾಗ ಹಾಗು ಅನುದಾನ ವಿಚಾರ ಬಹಳ ಮುಖ್ಯವಾಗುತ್ತದೆ'' ಎಂದು ತಿಳಿಸಿದ್ದರು.
ಇದನ್ನೂ ಓದಿ: ಬಜೆಟ್ನಲ್ಲಿ ಪ್ರವಾಸೋದ್ಯಮ.. ರಾಮನಗರದಲ್ಲಿ ರಾಮಮಂದಿರ, ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ..