ಭಿಕ್ಷುಕನ ಪಾತ್ರಗಳಿಂದಲೇ ಸ್ಯಾಂಡಲ್ ವುಡ್ನಲ್ಲಿ ಬೇಡಿಕೆಯ ಹಾಸ್ಯ ನಟರಾದವರು ಹಿರಿಯ ನಟ ವೈಜನಾಥ ಬಿರಾದಾರ್. ಸದ್ಯ ವೈಜನಾಥ ಬಿರಾದಾರ್ ಅವರು ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ಸಿನಿಮಾ '90 ಬಿಡಿ ಮನೀಗ್ ನಡಿ'. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಚಿತ್ರ, ಬಿಡುಗಡೆಗೂ ಮುಂಚೆಯೇ ಇದರ ಆಡಿಯೋ ರೈಟ್ಸ್ ಒಳ್ಳೆ ಮೊತ್ತಕ್ಕೆ ಮಾರಾಟ ಆಗಿದೆಯಂತೆ.
ಬಿರಾದಾರ್ ಅಭಿನಯದ 500ನೇ ಚಿತ್ರವಾಗಿದ್ದು, ಈ ಸಿನಿಮಾದ ಆಡಿಯೋವನ್ನು A2 ಮ್ಯೂಸಿಕ್ ಕಂಪನಿ ಖರೀದಿಸಿದೆ. ಈ ಮೂಲಕ ಹಾಸ್ಯನಟ ಬಿರಾದಾರ್ ಅವರನ್ನ ಕಮರ್ಷಿಯಲ್ ನಾಯಕನನ್ನಾಗಿಸುವಂತ ಸಾಹಸ ತೋರಿದ, ಬಾಗಲಕೋಟೆಯ ಅಮ್ಮಾ ಟಾಕೀಸ್ ಸಂಸ್ಥೆಗೆ ಸಹಜವಾಗಿಯೇ ಖುಷಿಯಾಗಿದೆ. ಈ ಸಿನಿಮಾ ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ಟೈಟಲ್ ತಗಾದೆ ಎದುರಿಸಿ, '90 ಹೊಡಿ ಮನೀಗ್ ನಡಿ' ಬದಲಿಗೆ, "90 ಬಿಡಿ ಮನೀಗ್ ನಡಿ" ಎಂಬ ಹೆಸರನ್ನ ಒಲ್ಲದ ಮನಸ್ಸಿನಿಂದ ಬದಲಾಯಿಸಿಕೊಂಡಿತ್ತು.
ಇದೀಗ ಆಡಿಯೋ ಮೂಲಕ ಭಾರಿ ಬೆಳವಣಿಗೆಯಿಂದಾಗಿ ಚಿತ್ರತಂಡ ಖಷ್ ಆಗಿದೆ. ಹಾಗೆ ನೋಡಿದರೆ, ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಾಂಧಿ ನಗರದಲ್ಲಿ ಇವರ ಹೊಸ ಸಾಹಸದ ಬಗ್ಗೆ ಸದ್ದಂತು ಇದ್ದೇ ಇತ್ತು. 70 ವರ್ಷ ವಯಸ್ಸಿನ ಹಿರಿಯ ನಟನನ್ನ, ಕಮರ್ಷಿಯಲ್ ಚಿತ್ರಕ್ಕೆ ಹೀರೋ ಮಾಡಿದ್ದೇ ಒಂದು ಹೊಸ ಪ್ರಯೋಗ ಮತ್ತು ಸಾಹಸ ಎಂಬುದು ಸಿನಿಪಂಡಿತರ ಲೆಕ್ಕಾಚಾರದ ಮಾತಾಗಿದೆ. ಅದರಂತೆ ಇದೀಗ ಸಿನಿಮಾ ಪೂರ್ಣಗೊಂಡು ಫಸ್ಟ್ ಕಾಪಿ ತಯಾರಾಗಿದೆ.
ಮುಂದುವರೆದ ಚಿತ್ರತಂಡ ಸಿನಿಮಾ ಸೆನ್ಸಾರ್ ಕಾರ್ಯ ಮುಗಿಸಿಕೊಂಡು, ಚಿತ್ರದ ಮುಂದಿನ ಬೆಳವಣಿಗೆಯ ಕಾರ್ಯವಾಗಿ ಆಡಿಯೋ ಕಂಪನಿಯ ಕದ ತಟ್ಟಿದೆ. ಅಲ್ಲಿ ಹಾಡು ಭಾರಿ ಬೆಲೆಗೆ ಮಾರಾಟ ಆಗಿದೆ. ಮೂಲಗಳ ಪ್ರಕಾರ 30 ರಿಂದ 40 ಲಕ್ಷಕ್ಕೆ ಮಾರಾಟ ಆಗಿದೆ. ಈ ಚಿತ್ರದ ಜಂಟಿ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಹೇಳುವ ಹಾಗೆ, ಮೊದಲಿಗೆ ನಾವು ತೋರಿಸಿದ ಪ್ರಿವ್ಯೂವ್ ಹಾಡು ಕಂಡ ಕಂಪನಿಯವರು, ಎಪ್ಪತ್ತು ವರ್ಷದ ಬಿರಾದಾರ್ ಡಾನ್ಸ್ ಸ್ಟೆಪ್ಸ್ಗೆ ಫುಲ್ ಫಿದಾ ಆಗಿದ್ದಾರೆ. ನಮ್ಮ ಈ ಸಾಹಸಕ್ಕೆ ಬೆನ್ನು ತಟ್ಟಿ ಭೇಷ್ ಎಂದಿದ್ದಾರೆ ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ಕರೀನಾ ಕಪೂರ್ ಹೃದಯದಲ್ಲಿ ವಿಶೇಷ ಸ್ಥಾನ ಪಡೆದ 'ಲಾಲ್ ಸಿಂಗ್ ಚಡ್ಡಾ'