ಮೈಸೂರು: ಮೈಸೂರು ದಸರಾ 2022 ಹಿನ್ನೆಲೆ ನಾಳೆಯಿಂದ ನಡೆಯಲಿರುವ ಯುವ ದಸರಾ ಅಂಗವಾಗಿ ನಾಳೆ ಅಪ್ಪು ನಮನ ಕಾರ್ಯಕ್ರಮ ಅನ್ನು ದಿವಂಗತ ಪುನೀತ್ ರಾಜ್ಕುಮಾರ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಇಂದು ಯುವ ದಸರಾ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಸೆ.28ಕ್ಕೆ (ನಾಳೆ) "ಅಪ್ಪು ನಮನ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಸರಾಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಯುವ ದಸರಾದಲ್ಲಿ ಗೋಲ್ಡ್ ಪಾಸ್ ಹೊರತುಪಡಿಸಿ ಯಾವುದೇ ಪಾಸ್ ಇರುವುದಿಲ್ಲ ಎಂದರು.
ಯುವ ಸಂಭ್ರಮ/ಯುವ ದಸರಾ ಉಪ ಸಮಿತಿ ವತಿಯಿಂದ ನಾಳೆಯಿಂದ ಅ.3ರವರೆಗೆ ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ನಟ ಶಿವರಾಜ್ಕುಮಾರ್ ಆಗಮಿಸಲಿದ್ದಾರೆ. ಶಾಸಕ ಎಲ್. ನಾಗೇಂದ್ರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ನಾಳೆ ಸಂಜೆ 7ಗಂಟೆಯಿಂದ ಅಪ್ಪು ನಮನ ಕಾರ್ಯಕ್ರಮ ಜರುಗಲಿದ್ದು, ಖ್ಯಾತ ಹಿನ್ನೆಲೆ ಗಾಯಕರಾದ ಗುರುಕಿರಣ್, ವಿಜಯ್ ಪ್ರಕಾಶ್, ಕುನಾಲ್ ಗಾಂಜಾವಾಲ ಕಾರ್ಯಕ್ರಮ ನೀಡಲಿದ್ದಾರೆ.
ಯುವ ದಸರಾ ಕಾರ್ಯಕ್ರಮ:
- ಸೆ.29ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸ್ಥಳೀಯ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ, ಡ್ಯಾನ್ಸರ್ ಪವನ್ ಹಾಗೂ ಇತರರಿಂದ ನೃತ್ಯ ರೂಪಕ, ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್ ಅವರಿಂದ ಸಂಗೀತ ರಸಸಂಜೆ ನಡೆಯಲಿದೆ.
- ಸೆ.30ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮ, ಲೇಸರ್ ಆ್ಯಕ್ಟ್ & ಸಿಗ್ನೇಚರ್ ಗ್ರೂಪ್ ನೃತ್ಯ ತಂಡದಿಂದ ನೃತ್ಯ ರೂಪಕ, ಸ್ಯಾಂಡಲ್ ವುಡ್ ನೈಟ್ ನಡೆಯಲಿದೆ.
- ಅ.1ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಹಿನ್ನೆಲೆ ಗಾಯಕ ಸೋನು ನಿಗಮ್, ಗಾಯಕಿ ಡಾ.ಶಮಿತಾ ಮಲ್ನಾಡ್ ಅವರಿಂದ ಸಂಗೀತ ರಸಮಂಜರಿ ಇರಲಿದೆ.
- ಅ.2ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಖ್ಯಾತ ಚಿತ್ರ ತಾರೆಯರಾದ ಹರ್ಷಿಕಾ ಪೂಣಚ್ಚ, ವಿಜಯ ರಾಘವೇಂದ್ರ ಅವರಿಂದ ಕನ್ನಡ ಸ್ಟಾರ್ ನೈಟ್, ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ, ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ.
- ಅ.3ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸುಪ್ರಿಯಾ ರಾಮ್ & ಮಹಿಳಾ ಬ್ಯಾಂಡ್ ತಂಡದವರಿಂದ ಪ್ರದರ್ಶನ, ಫ್ಯಾಷನ್ ಶೋ, ಗಾಯಕಿ ಸುನಿಧಿ ಚೌಹಾಣ್ ಅರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಯುವ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಆರ್.ಚೇತನ್ ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಮೈಸೂರು ದಸರಾ.. ಸಾಂಪ್ರದಾಯಿಕ ಕುಸ್ತಿಗೆ ಚಾಲನೆ
ಯುವ ದಸರಾ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಸಮಿತಿಯ ಕಾರ್ಯಾಧ್ಯಕ್ಷ ವೆಂಕಟರಾಜು ಎನ್ಸಿ, ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷರುಗಳಾದ ಎಂ.ಬದರೀಶ್, ಸಂತೋಷ್ ಕುಮಾರ್, ಎಂ.ಮಹೇಂದ್ರ, ಕಾರ್ಯದರ್ಶಿ ಆಶಾದ್ ರೆಹಮಾನ್ ಷರೀಫ್, ಡಾ.ನಿಂಗರಾಜು ಆರ್ ಮತ್ತಿತರರು ಉಪಸ್ಥಿತರಿದ್ದರು.