ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಥಿಯೇಟರ್ಗಳಲ್ಲಿ ಧೂಳೆಬ್ಬಿಸುತ್ತಿದೆ. ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗಳ ಮೈಲಿಗಲ್ಲನ್ನು ತಲುಪಲು ವೇಗದ ಓಟ ಮುಂದುವರೆಸಿದೆ. ಬಿಡುಗಡೆಯಾದ ಹದಿನೈದು ದಿನದಲ್ಲಿ ದೇಶಿಯವಾಗಿ ಈವರೆಗೆ ಒಟ್ಟು 484.86 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಚಿತ್ರದಲ್ಲಿ ಮಹಿಳೆಯನ್ನು ಬಿಂಬಿಸಿದ ರೀತಿಗೆ ಟೀಕೆಗಳು ಕೇಳಿ ಬಂದಿದ್ದರೂ, ಕಲೆಕ್ಷನ್ಗೆ ಯಾವುದೇ ಪರಿಣಾಮ ಬೀರದೇ 'ಅನಿಮಲ್' ವೇಗದ ಓಟ ಮುಂದುವರೆಸಿದೆ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ ವರದಿ ಪ್ರಕಾರ, 'ಅನಿಮಲ್' ಸಿನಿಮಾ ಭಾರತೀಯ ಚಿತ್ರಮಂದಿರಗಳಲ್ಲಿ 15ನೇ ದಿನ 8.02 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಈವರೆಗಿನ ಅತ್ಯಂತ ಕಡಿಮೆ ಕಲೆಕ್ಷನ್ ಆಗಿದೆ. ಬಿಡುಗಡೆಯಾದ ಮೊದಲೆರಡು ವಾರದಲ್ಲಿ ವಿಶ್ವದಾದ್ಯಂತ 797.6 ಕೋಟಿ ರೂ. ಗಳಿಸಿದೆ. ಈ ವಾರಾಂತ್ಯದಲ್ಲಿ 800 ಕೋಟಿ ರೂ. ದಾಟಲು ಸಿದ್ಧವಾಗಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಪಠಾಣ್, ಜವಾನ್ ನಂತರ ಇದು 1000 ಕೋಟಿ ರೂಪಾಯಿಗಳನ್ನು ದಾಟಿದ ಈ ವರ್ಷದ ಮೂರನೇ ಬಾಲಿವುಡ್ ಚಿತ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದಾಗ್ಯೂ, ಚಿತ್ರದಲ್ಲಿನ ಮಹಿಳೆಯರ ಚಿತ್ರಣ ಮತ್ತು ವಿಷಕಾರಿ ಪುರುಷತ್ವದ ವೈಭವೀಕರಣಕ್ಕಾಗಿ ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿದೆ.
ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ, ರಣ್ಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ನಟನೆ ಪ್ರೇಕ್ಷಕರಿಂದ ಪ್ರಶಂಸೆ ಗಳಿಸಿದೆ. ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಶಕ್ತಿ ಕಪೂರ್ ಮತ್ತು ತ್ರಿಪ್ತಿ ಡಿಮ್ರಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೂರು ಗಂಟೆ ಇಪ್ಪತ್ತೊಂದು ನಿಮಿಷಗಳ ಅನಿಮಲ್ ಸಿನಿಮಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ತಂದೆ - ಮಗನ ಸಂಬಂಧದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಹೊಡೆದಾಟ ಬಡೆದಾಟ, ಆ್ಯಕ್ಷನ್ ದೃಶ್ಯಗಳು, ರಕ್ತಭರಿತ ದೃಶ್ಯಗಳು ಕೊಂಚ ಹೆಚ್ಚೇ ಇದೆ ಅಂತಾರೆ ನೆಟ್ಟಿಗರು.
- " class="align-text-top noRightClick twitterSection" data="">
ಇನ್ನೂ ಈ ತಿಂಗಳ ಕೊನೆಯಲ್ಲಿ ಎರಡು ಬಹುನಿರೀಕ್ಷಿತ ಚಿತ್ರಗಳು ತೆರೆಕಾಣಲಿವೆ. ಪ್ರಭಾಸ್ ನಟನೆಯ ಸಲಾರ್ (ಡಿ.22), ಶಾರುಖ್ ಖಾನ್ (ಡಿ.21) ಮುಖ್ಯಭೂಮಿಕೆಯ ಡಂಕಿ ಬಿಡುಗಡೆವರೆಗೂ ಮುನ್ನ ಅನಿಮಲ್ ಚಿತ್ರಮಂದಿರಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ. 'ಅನಿಮಲ್' ಬಿಡುಗಡೆಯ ಸಮಯದಲ್ಲೇ ತೆರೆ ಕಂಡ ಮೇಘನಾ ಗುಲ್ಜಾರ್ ನಿರ್ದೇಶನದ 'ಸ್ಯಾಮ್ ಬಹದ್ದೂರ್' ಸಾಧಾರಣ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ 'ಅನಿಮಲ್' ನಾಗಾಲೋಟ; 700 ಕೋಟಿ ಸಂಪಾದನೆ