ಕನ್ನಡ ಚಿತ್ರರಂಗದ ಪ್ರಸಿದ್ಧ ಆಡಿಯೋ ಸಂಸ್ಥೆ 'ಆನಂದ್ ಆಡಿಯೋ'ಗೆ ಎರಡೂವರೆ ದಶಕಗಳು ತುಂಬುತ್ತಿವೆ. ಕಳೆದ 24 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಈ ಕಂಪನಿ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಸಾಧನೆಯ ಹಾದಿಯಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ಕೇಳುಗರಿಗೆ ತಲುಪಿಸಿದೆ. ಕನ್ನಡದ ಆಡಿಯೋ ಕಂಪನಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಆನಂದ್ ಆಡಿಯೋ ಸಂಸ್ಥೆಗೆ ಮತ್ತೊಂದು ಪ್ರಶಸ್ತಿಯ ಗರಿ ಒಲಿದು ಬಂದಿದೆ. ಅದುವೇ 'ಡೈಮಂಡ್ ಬಟನ್'. ಯೂಟ್ಯೂಬ್ ಸಂಸ್ಥೆ ಕಡೆಯಿಂದ ಸಿಗುವ ಗೌರವವಿದು.
ಕನ್ನಡದಲ್ಲಿ ಸದ್ಯ ಬಹಳಷ್ಟು ಆಡಿಯೋ ಕಂಪನಿಗಳು ಕೆಲಸ ಮಾಡುತ್ತಿವೆ. ದಿನ ದಿನಕ್ಕೆ ಹೊಸ ಹೊಸ ಆಡಿಯೋ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಆನಂದ್ ಆಡಿಯೋ ಮಾತ್ರ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಅಗ್ರ ಕ್ರಮಾಂಕದಲ್ಲಿ ಉಳಿಸಿಕೊಂಡಿದೆ. ಫ್ರೆಂಡ್ಸ್ ಹಾಗೂ ವಿಕ್ಟರಿ ಎಂಬ ಸಿನಿಮಾವನ್ನೂ ಈ ಸಂಸ್ಥೆ ನಿರ್ಮಿಸಿದೆ.
ಆನಂದ್ ಆಡಿಯೋ ಶುರು ಆಗಿದ್ದಕ್ಕೂ ಒಂದು ಕಾರಣ ಇದೆ. ಸದ್ಯ ಕಂಪನಿಯ ಹೊಣೆ ಹೊತ್ತಿರುವ ಶ್ಯಾಮ್ ಅವರ ಅಣ್ಣ ಮೋಹನ್ ಚಾಬ್ರಿಯಾ 1989 ರಲ್ಲಿ ಟ್ರೆಂಡಿಂಗ್ನಲ್ಲಿ ಇದ್ದರು. ಟಿವಿ ರೈಟ್ಸ್ಗಳನ್ನು ನೋಡಿಕೊಳ್ಳುತ್ತಿದ್ದರು. ಆಗ ತಮ್ಮ ಅಂಗಡಿ ಆನಂದ್ ಮ್ಯೂಸಿಕ್ ಅನ್ನು ಆನಂದ್ ಆಡಿಯೋ ಆಗಿ ಮಾಡಿದರು. ಆನಂದ್ ಎನ್ನುವುದು ಮೋಹನ್ ಚಾಬ್ರಿಯಾ ಅವರ ಮಗನ ಹೆಸರು ಆನಂದ್. ಈ ಹೆಸರು ಈಗ ಕನ್ನಡ ಚಿತ್ರರಂಗ ಅಲ್ಲದೇ ಇಡೀ ದೇಶದೆಲ್ಲೆಡೆ ವಿಜೃಂಭಿಸುತ್ತಿದೆ.
ಒಂದು ಕೋಟಿ ಜನರಿಂದ ಸಬ್ ಸ್ಕ್ರೈಬ್: ಕಳೆದ 24 ವರ್ಷಗಳಿಂದ ಶ್ರೋತೃಗಳಿಗೆ ಕನ್ನಡ ಚಿತ್ರಗಳ ಸುಮಧುರ ಹಾಡುಗಳನ್ನು ತಲುಪಿಸುತ್ತಾ ಬಂದಿರುವ ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಗೆ ಮುಂದಿನ ವರ್ಷ ರಜತ ವರ್ಷದ ಸಂಭ್ರಮ. ಈಗ ಆನಂದ್ ಆಡಿಯೋ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಲಭಿಸಿದೆ. ಹೌದು, ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಅನ್ನು ಒಂದು ಕೋಟಿ ಜನರು ಸಬ್ ಸ್ಕ್ರೈಬ್ ಮಾಡಿಕೊಂಡಿದ್ದಾರೆ. ಹಾಗಾಗಿ ಯೂಟ್ಯೂಬ್ ಸಂಸ್ಥೆಯಿಂದ ಆನಂದ್ ಆಡಿಯೋ ಸಂಸ್ಥೆಗೆ ಡೈಮಂಡ್ ಬಟನ್ ಸಿಕ್ಕಿದೆ.
ಇದನ್ನೂ ಓದಿ: ಅಪ್ಪನ ಚಿತ್ರದ ಹಾಡುಗಳಿಗೆ ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಮಸ್ತ್ ಡ್ಯಾನ್ಸ್: ವಿಶೇಷ ವಿಡಿಯೋ
ಮೇ 24, ಆನಂದ್ ಆಡಿಯೋ ಮಾಲೀಕ ಮೋಹನ್ ಚಾಬ್ರಿಯಾ ಅವರ ಹುಟ್ಟುಹಬ್ಬ. ಅದೇ ದಿನ ಡೈಮಂಡ್ ಬಟನ್ ದೊರಕಿರುವುದು ಖುಷಿಯ ವಿಚಾರ. ಇದಕ್ಕೆ ಕಾರಣರಾದ ಕನ್ನಡ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಚಾಬ್ರಿಯಾ ಮತ್ತು ಆನಂದ್ ಚಾಬ್ರಿಯಾ ಕೃತಜ್ಞತೆ ತಿಳಿಸಿದ್ದಾರೆ. 'ಆನಂದ್ ಆಡಿಯೋ' ಸಾಧನೆಗೆ ಕನ್ನಡಿಗರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಪ್ಪನ ಜೊತೆ ಮಗಳ ಲಾಂಗ್ ಡ್ರೈವ್: ವಿಡಿಯೋ ಹಂಚಿಕೊಂಡ ನಟಿ ಬಿಪಾಶಾ ಬಸು