ಮುಂಬೈ (ಮಹಾರಾಷ್ಟ್ರ): ಆಗಸ್ಟ್ ತಿಂಗಳಿನಲ್ಲಿ ಹಲವು ಸಿನಿಮಾಗಳು ಬಿಡುಗಡೆಗೆಯಾಗಲಿವೆ. ದೊಡ್ಡ ದೊಡ್ಡ ನಟರ ಸಿನಿಮಾಗಳೇ ತೆರೆಗಪ್ಪಳಿಸಲು ಸಜ್ಜಾಗಿದ್ದು ಸಿನಿಪ್ರಿಯರಿಗೆ ಹಬ್ಬದೂಟ ಉಣಬಡಿಸಲಿವೆ. ಬಾಲಿವುಡ್‌ನ ಇಬ್ಬರು ಸೂಪರ್ ಸ್ಟಾರ್ಗಳಾದ ಅಕ್ಷಯ್ ಕುಮಾರ್ ಅಭಿನಯದ ಫ್ಯಾಮಿಲಿ ಎಂಟರ್ಟೈನರ್ 'ರಕ್ಷಾ ಬಂಧನ್' ಹಾಗೂ ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ 'ಲಾಲ್ ಸಿಂಗ್ ಛಡ್ಡಾ' ಒಂದೇ ದಿನ ರಿಲೀಸ್ ಆಗಲಿವೆ. ಇದರ ನಡುವೆ ಸೌತ್ನ ಮತ್ತೊಂದು ಬಿಗ್ ಬಜೆಟ್ ಚಿತ್ರ ಪ್ರಭಾಸ್ ನಟಿಸಿರುವ 'ಆದಿಪುರುಷ್' ಕೂಡ ಅಂದೇ ಬಿಡುಗಡೆಯಾಲಿದೆ ಎಂದು ತಿಳಿದು ಬಂದಿದೆ.
ಸಣ್ಣಪುಟ್ಟ ಸಿನಿಮಾಗಳು ಸೇರಿದಂತೆ ಹಲವು ಚಿತ್ರಗಳು ಆಗಸ್ಟ್ 11ರಂದು ಥಿಯೇಟರ್‌ಗಳಲ್ಲಿ ಒಟ್ಟಿಗೆ ರಾರಾಜಿಸಲಿವೆ. ಬಾಲಿವುಡ್‌ನ ಈ ಎರಡು ಚಿತ್ರಗಳು ಕೊರೊನಾ ಹಾಗೂ ಕೆಲವು ಅಡೆತಡೆಗಳ ಕಾರಣದಿಂದ ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡು ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ತಾವು ಎಲ್ಲರೂ ಒಂದೇ ದಿನ ಥಿಯೇಟರ್‌ಗಳಲ್ಲಿ ಸಿಗುತ್ತೇವೆಂದು ಯಾರೂ ಅಂದುಕೊಂಡರಲಿಲ್ಲ. ಈ ಮೂರು ಚಿತ್ರಗಳು ದೊಡ್ಡ ಮಟ್ಟದ ಬಜೆಟ್ನಿಂದ ಕೂಡಿದ ಸಿನಿಮಾ ಆಗಿದ್ದು ಒಂದೇ ದಿನ ಬಿಡುಗಡೆಯಾಗುತ್ತಿದ್ದು ಪೈಪೋಟಿ ಏರ್ಪಟ್ಟರೂ ಆಶ್ಚರ್ಯಪಡಬೇಕಿಲ್ಲ.

ತಮ್ಮ ಚಿತ್ರದ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್, ನಿಮ್ಮೆಲ್ಲರಿಗೂ ಬಂಧನದ ಶುದ್ಧ ರೂಪದ ಕಥೆಯನ್ನು ತರುತ್ತಿದ್ದೇವೆ. ಇದು ನಿಮ್ಮದೇ ಕಥೆಯನ್ನು ನಿಮಗೆ ನೆನಪಿಸುತ್ತದೆ. ರಕ್ಷಾ ಬಂಧನ್ ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ. ಆನಂದ್ ಎಲ್ ರೈ ನಿರ್ದೇಶನದ ಚಿತ್ರ ಇದಾಗಿದ್ದು ಅಕ್ಷಯ್ ಕುಮಾರ್ ಜೊತೆ ಭೂಮಿ ಪೆಡ್ನೇಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಪ್ರೇಕ್ಷಕರು 'ರಕ್ಷಾ ಬಂಧನ' ಚಿತ್ರದ 'ತೇರೆ ಸಾಥ್ ಹುನ್ ಮೈನ್' ಹಾಡಿನ ಟೀಸರ್ ಸಹ ಕೇಳಬಹುದು.
ಇತ್ತೀಚೆಗೆ ನಟ ಅಮೀರ್ ಖಾನ್ ಕೂಡ ತಮ್ಮ ಮುಂಬರುವ ಚಿತ್ರ 'ಲಾಲ್ ಸಿಂಗ್ ಛಡ್ಡಾ' ಕೂಡ ಆ. 11 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಎರಡು ಬಾರಿ ತಮ್ಮ ಚಿತ್ರದ ದಿನಾಂಕವನ್ನು ಮುಂದೂಡಿರುವ ಅವರು ಇದೀಗ ಆ. 11ಕ್ಕೆ ಬಂದು ನಿಂತಿದ್ದಾರೆ. ಇತ್ತೀಚೆಗೆ ಏ. 14ಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದರು. ಆದರೆ ಯಶ್ ನಟನೆಯ ಕೆಜಿಎಫ್ ಚಿತ್ರಕ್ಕೆ ಅವರು ದಾರಿ ಮಾಡಿಕೊಟ್ಟರು.

'ಲಾಲ್ ಸಿಂಗ್ ಛಡ್ಡಾ' ಚಿತ್ರದಲ್ಲಿ ಮೊದಲ ಬಾರಿಗೆ ನಾನು ಸಿಖ್ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದೇನೆ. ಹಾಗಾಗಿ ಬೈಸಾಖಿ ಹಬ್ಬದ ದಿನದಂದು ಈ ಸಿನಿಮಾ ಬಿಡುಗಡೆ ಆಗುವುದು ಸೂಕ್ತ ಎನಿಸಿತು. ಹಾಗಾಗಿ ನಾನು ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಏ.14 ಕ್ಕೆ ನಿಗದಿಪಡಿಸಿದೆ. ಬೇರೆ ಸಿನಿಮಾಗಳಿಗೆ ತೊಂದರೆ ಕೊಡುವ ಉದ್ದೇಶದಿಂದ ಅಲ್ಲ. ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದ್ದರೆ ಅದೇ ದಿನ ನನ್ನ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ಆದರೆ, ಈ ಹಬ್ಬದ ದಿನವೇ ನನ್ನ ಸಿನಿಮಾ ಬಿಡುಗಡೆ ಆಗುವುದು ಸೂಕ್ತವೆಂಬ ಕಾರಣಕ್ಕೆ ಈ ನಿರ್ಧಾರ ಮಾಡಬೇಕಾಯಿತು ಎಂದಿದ್ದರು.
ಆದರೆ, ಇತ್ತೀಚೆಗೆ ಹೊಸ ದಿನಾಂಕದೊಂದಿಗೆ ಮತ್ತೆ ಟ್ವೀಟ್ ಮಾಡುವ (ಐಪಿಎಲ್ 2022ರ ಫೈನಲ್ಸ್ ವೇಳೆ) ಮಾಡುವ ಮೂಲಕ ತಮ್ಮ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದರು. ಟ್ರೇಲರ್ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಈ ಚಿತ್ರದಲ್ಲಿ ಅಮೀರ್ ಖಾನ್ ಜೊತೆಗೆ ಕರೀನಾ ಕಪೂರ್ ಖಾನ್ ಮತ್ತು ದಕ್ಷಿಣ ಭಾರತದ ನಟ ನಾಗ ಚೈತನ್ಯ ವಿಶೇಷ ಅತಿಥಿ ಪಾತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಅತ್ರಂಗಿ ರೇ' ನಂತರ ನಟ ಅಕ್ಷಯ್ ಕುಮಾರ್ ನಿರ್ದೇಶಕ ಆನಂದ್ ಎಲ್ ರೈ ಜೊತೆ ಕೆಲಸ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಹಾಗಾಗಿ ಅವರು ಸಹ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಅಭಿನಯ್ ರಾಜ್ ಸಿಂಗ್, ಸಾಹೇಜ್ಮೀನ್ ಕೌರ್, ದೀಪಿಕಾ ಖನ್ನಾ, ಸಾದಿಯಾ ಖತೀಬ್ ಮತ್ತು ಸ್ಮೃತಿ ಶ್ರೀಕಾಂತ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಾಲಿವುಡ್ ನಿರ್ದೇಶಕ ಓಂ ಪ್ರಕಾಶ್ ರಾವತ್ ಅವರು ಇದೇ ಮೊದಲ ಬಾರಿಗೆ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು ಅವರು ಕೂಡ ಭಾರಿ ನಿರೀಕ್ಷೆಯಲ್ಲಿದ್ದಾರೆ. ಚಿತ್ರದಲ್ಲಿ ಕೃತಿ ಸನೋನ್, ಸೈಫ್ ಅಲಿ ಖಾನ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಚಿತ್ರವೂ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಳಯಾಳಂ ಸೇರಿದಂತೆ ವಿಶ್ವದಾದ್ಯಂತ ತೆರೆ ಕಾಣಲಿದೆ.
ಈ ವರ್ಷದಲ್ಲಿ ಅಕ್ಷಯ್ ಕುಮಾರ್ ನಟನೆಯ ಈ ವರೆಗೆ (ಬಚ್ಚನ್ ಪಾಂಡೆ ಮತ್ತು ಸಾಮ್ರಾಟ್ ಪೃಥ್ವಿರಾಜ್) ಎರಡು ಸಿನಿಮಾಗಳು ಬಿಡುಗಡೆಯಾಗಿದ್ದು 'ರಕ್ಷಾ ಬಂಧನ್' ಮೂರನೇ ಚಿತ್ರವಾಗಿದೆ. ಆದರೆ, ಅಮೀರ್ ಖಾನ್ 2018 ರಲ್ಲಿ ಬಿಡುಗಡೆಯಾದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರವೇ ಕೊನೆಯದ್ದಾಗಿದ್ದು ನಾಲ್ಕು ವರ್ಷಗಳ ನಂತರ ಥಿಯೇಟರ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಹುಬಲಿ ಬಳಿಕ ಸಾಹೋ ಮತ್ತು ರಾಧೆ ಶಾಮ್ ಚಿತ್ರಗಳಲ್ಲಿ ಸತತ ಸೋಲು ಕಂಡಿರುವ ಪ್ರಭಾಸ್ ಈ ಸಲ ಮತ್ತೆ ಚಮತ್ಕಾರ ಮಾಡಲಿದ್ದಾರೆ ಅನ್ನೋದು ಅಭಿಮಾನಿಗಳ ಮಾತು. ಇವುಗಳ ನಡುವೆ ಸೌತ್ ಸ್ಟಾರ್ ಸಮಂತಾ ಪ್ರಭು ಅವರ ಪ್ಯಾನ್-ಇಂಡಿಯಾ ಚಿತ್ರ 'ಯಶೋದಾ' ಕೂಡ ಅಂದೇ ಬಿಡುಗಡೆಯಾಲಿದೆಯಂತೆ.