ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಅವರು ತಮ್ಮ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ರಾಮ್ ಸೇತು' ಚಿತ್ರದ ಮೊದಲ ನೋಟವನ್ನು ಗುರುವಾರ ರಿವೀಲ್ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನಟ ಸತ್ಯದೇವ್ ಅವರೊಂದಿಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಪೋಸ್ಟ್ಗೆ #ರಾಮಸೇತು ಪ್ರಪಂಚದ ಒಂದು ನೋಟ. ಚಿತ್ರಮಂದಿರಗಳಲ್ಲಿ ದೀಪಾವಳಿ, 2022' ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕೈಯಲ್ಲಿ ಬೆಂಕಿಯ ಪಂಜು ಹಿಡಿದುಕೊಂಡಿದ್ದು, ಡಾರ್ಕ್ ಲೈಟ್ ಶೇಡ್ನಲ್ಲಿ ಮಿಂಚಿದ್ದಾರೆ. ಜಾಕ್ವೆಲಿನ್ ಮತ್ತು ಸತ್ಯ ದೇವ್ ಅವರ ಪಕ್ಕದಲ್ಲೇ ನಿಂತಿರುವುದನ್ನು ಗಮನಿಸಬಹುದು. ಚಿತ್ರದ ಹಿನ್ನೆಲೆಯು ನಿಗೂಢ ಐತಿಹಾಸಿಕ ವೈಬ್ ಇರುವಂತೆ ಕಾಣುತ್ತದೆ.
ಈ ಸಾಹಸಮಯ ಚಿತ್ರ ಪೌರಾಣಿಕ ರಾಮ-ಸೇತುವಿನ ನಿಜವಾದ ಅಸ್ತಿತ್ವ ಸಾಬೀತುಪಡಿಸಲು ಸಮಯದ ವಿರುದ್ಧ ಓಡುವ ಒಬ್ಬ ಪುರಾತತ್ವಶಾಸ್ತ್ರಜ್ಞನ (ಆರ್ಕಿಯೋಲಾಜಿಸ್ಟ್) ಕಥೆಯಾಗಿದೆ. ಇದು ಭಾರತೀಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಕಥೆಯ ಮೇಲೆ ಬೆಳಕು ಚೆಲ್ಲುತ್ತದೆ. ರಾಮ್ ಸೇತು ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ನಟರಾದ ಜಾಕ್ವೆಲಿನ್ ಫರ್ನಾಂಡೀಸ್, ಸತ್ಯದೇವ್ ಮತ್ತು ನುಶ್ರತ್ ಭರುಚ್ಚಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮುಂದಿನ ವರ್ಷ ದೀಪಾವಳಿಗೆ ಬೆಳ್ಳಿತೆರೆಗೆ ಬರಲಿರುವ ಈ ಸಿನಿಮಾಗೆ ಅಭಿಷೇಕ್ ಶರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅರುಣಾ ಭಾಟಿಯಾ ಮತ್ತು ವಿಕ್ರಮ್ ಮಲ್ಹೋತ್ರಾ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಶೀಘ್ರದಲ್ಲೇ ರಾಮ್ ಸೇತು ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿರುತ್ತದೆ.
ಇದನ್ನೂ ಓದಿ: 'ಭಾರತಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ': ಅಜಯ್ ದೇವಗನ್ಗೆ ಸೋನು ಸೂದ್ ತಿರುಗೇಟು