'ಲೇಡಿ ಸೂಪರ್ಸ್ಟಾರ್' ಎಂದೇ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ನಯನತಾರಾ. ಇವರು ಇಲ್ಲಿಯವರೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರಲಿಲ್ಲ. ಆದರೆ ಇಂದು ಬ್ಯೂಟಿಫುಲ್ ತಾರೆ ಇನ್ಸ್ಟಾಗ್ರಾಮ್ಗೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಪೋಸ್ಟ್ ಹಂಚಿಕೊಳ್ಳುವುದರೊಂದಿಗೆ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದಾರೆ. 'ಜವಾನ್' ನಟಿ ತಮ್ಮ ಮಕ್ಕಳೊಂದಿಗಿನ ವಿಡಿಯೋವನ್ನು ಮೊದಲನೇ ಪೋಸ್ಟ್ ಆಗಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರೊಂದಿಗಿನ 'ಜವಾನ್' ಸಿನಿಮಾದ ಟ್ರೇಲರ್ ಕೆಲವೇ ಗಂಟೆಗಳ ಹಿಂದೆ ಬಿಡುಗಡೆಯಾಗಿದೆ. ಅದಕ್ಕೂ ಮೊದಲು ನಯನತಾರಾ ಇನ್ಸ್ಟಾಗ್ರಾಮ್ ಪ್ರವೇಶಿಸಿದ್ದಾರೆ. ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಮುಖವನ್ನು ವಿಡಿಯೋ ಮೂಲಕ ಪರಿಚಯಿಸಿದ್ದಾರೆ. ಉಯಿರ್ ಮತ್ತು ಉಲಗಮ್ ಅವರನ್ನು ಜಗತ್ತಿಗೆ ಪರಿಚಯಿಸುವ ವಿಡಿಯೋವನ್ನು ಹಂಚಿಕೊಳ್ಳಲು ನಟಿ ಇನ್ಸ್ಟಾಗ್ರಾಮ್ ಅನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.
ನಯನತಾರಾ ಪೋಸ್ಟ್: ಮಕ್ಕಳ ಜೊತೆಗಿನ ರೀಲ್ಸ್ ಹಂಚಿಕೊಂಡ ನಟಿ, "ನಾನು ಬಂದಿದ್ದೇನೆ ಎಂದು ಹೇಳಿ.." ಎಂಬ ಕ್ಯಾಪ್ಶನ್ ನೀಡಿದ್ದಾರೆ. ನಯನತಾರಾ ತಮ್ಮ ಮಕ್ಕಳು ಒಂದೇ ಬಣ್ಣದ ದಿರಿಸಿನಲ್ಲಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ಕೂಲಿಂಗ್ ಗ್ಲಾಸ್ ಹಾಕಿಕೊಂಡು ರಾಕ್ ಆಗಿ ಕಾಣಿಸಿದ್ದಾರೆ. ತಮ್ಮಿಬ್ಬರು ಮಕ್ಕಳನ್ನು ನಯನತಾರಾ ಎತ್ತಿಕೊಂಡು ನಡೆದುಕೊಂಡು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೈಲರ್ ಚಿತ್ರದ 'ಅಲಪ್ಪರ' ಹಾಡಿನೊಂದಿಗೆ ಈ ರೀಲ್ಸ್ನ್ನು ನಟಿ ಹಂಚಿಕೊಂಡಿದ್ದಾರೆ.
'ಜವಾನ್' ಪ್ರೀ ರಿಲೀಸ್ ಈವೆಂಟ್ಗೆ ಗೈರು: 'ಜವಾನ್' ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಿನ್ನೆ ತಮಿಳುನಾಡಿನಲ್ಲಿ ನಡೆಯಿತು. ಚೆನ್ನೈನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಿರ್ದೇಶಕ ಅಟ್ಲಿ, ಕಿಂಗ್ ಖಾನ್, ಪ್ರಿಯಾಮಣಿ, ವಿಜಯ್ ಸೇತುಪತಿ, ಗಾಯಕ ಅನಿರುದ್ಧ್ ರವಿಚಂದರ್ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.
ಆದರೆ ಚಿತ್ರದ ಪ್ರಮುಖ ಪಾತ್ರಧಾರಿ ನಯನತಾರಾ ಗೈರಾಗಿದ್ದರು. ಓಣಂ ಹಬ್ಬದ ಹಿನ್ನೆಲೆಯಲ್ಲಿ ನಟಿ ನಯನತಾರಾಗೆ ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗಿರಲಿಲ್ಲ. ಅವರು ಕೇರಳದಲ್ಲಿ ಇರುವುದರಿಂದ ಜವಾನ್ ಪ್ರೀ ರಿಲೀಸ್ ಈವೆಂಟ್ನಲ್ಲಿ ಅವರು ಭಾಗಿಯಾಗಿರಲಿಲ್ಲ.
ಮಕ್ಕಳೊಂದಿಗೆ ಓಣಂ ಆಚರಣೆ: ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗಮ್ (Uyir & Ulagam) ಜೊತೆ ಮೊದಲ ಓಣಂ ಹಬ್ಬವನ್ನು ಜನಪ್ರಿಯ ತಾರಾ ದಂಪತಿ ಆಚರಿಸಿದ್ದಾರೆ. ವಿಘ್ನೇಶ್ ಶಿವನ್ ಸೋಷಿಯಲ್ ಮೀಡಿಯಾದಲ್ಲಿ ಪತ್ನಿ, ಪುತ್ರರೊಂದಿಗಿನ ಸುಂದರ ಫೋಟೋಗಳನ್ನು ಎರಡು ದಿನಗಳ ಹಿಂದೆ ಶೇರ್ ಮಾಡಿಕೊಂಡಿದ್ದರು. ವಿಘ್ನೇಶ್ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿದ್ದು, ''ನನ್ನ ಉಯಿರ್ ಮತ್ತು ಉಲಗಮ್ ಜೊತೆಗಿನ ಮೊದಲ ಓಣಂ, ದೇವರು ಆಶೀರ್ವದಿಸಲಿ, ಇಲ್ಲಿ ಹಬ್ಬ ಬೇಗ ಆರಂಭಗೊಂಡಿದೆ, ನಿಮ್ಮೆಲ್ಲರಿಗೂ ಮುಂಚಿತವಾಗಿಯೇ ಓಣಂ ಹಬ್ಬದ ಶುಭಾಶಯ ಕೋರುತ್ತಿದ್ದೇನೆ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: 'ಜವಾನ್' ಮೂಲಕ ಶಾರುಖ್ ಖಾನ್ ವಿರುದ್ಧ ಸೇಡು ತೀರಿಸಿಕೊಂಡ ವಿಜಯ್ ಸೇತುಪತಿ.. ಏನದು ಹಳೆ ಘಟನೆ?