2023 ರಲ್ಲಿ ತೆರೆಕಂಡ ಪೌರಾಣಿಕ ಕಥೆಯಾಧಾರಿತ ಸಿನಿಮಾ 'ಆದಿಪುರುಷ್'. ಭಗವಾನ್ ಶ್ರೀರಾಮನ ಪಾತ್ರದಲ್ಲಿ ಸೌತ್ ಸೂಪರ್ ಸ್ಟಾರ್ ಪ್ರಭಾಸ್, ಸೀತಾದೇವಿ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದರು. ಚಿತ್ರಮಂದಿರದಲ್ಲಿ ತೆರೆಕಂಡ ಒಂದೂವರೆ ತಿಂಗಳ ಬಳಿಕ ಆನ್ಲೈನ್ ಸೇವೆಯಲ್ಲಿ ಲಭ್ಯವಾಗಿದೆ. ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಸಿನಿರಸಿಕರ ಉತ್ಸಾಹಕ್ಕೆ ಕಾರಣವಾಗಿದೆ.
ಜೂನ್ 16 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ಆದಿಪುರುಷ್ ಗ್ರಾಫಿಕ್ಸ್, ಡೈಲಾಗ್ಸ್ ವಿಚಾರವಾಗಿ ಸಾಕಷ್ಟು ಟೀಕೆ ಎದುರಿಸಿತ್ತು. ಆದಾಗ್ಯೂ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿಮಾನಿಗಳು ಒಟಿಟಿ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದರು. ಸರ್ಪ್ರೈಸ್ ಎನ್ನುವಂತೆ ಡಿಜಿಟಲ್ ರಿಲೀಸ್ ಸಂಬಂಧ ಯಾವುದೇ ಪೂರ್ವಸೂಚನೆಯಿಲ್ಲದೇ, ಇಂದು ಒಟಿಟಿಯಲ್ಲಿ ತೆರೆಕಂಡಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಉತ್ಸಾಹ ಮನೆಮಾಡಿದೆ.
ಅಮೆಜಾನ್, ನೆಟ್ಫ್ಲಿಕ್ಸ್ನಲ್ಲಿ ಲಭ್ಯ: ಆದಿಪುರುಷ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್ಫ್ಲಿಕ್ಸ್ ಎರಡರಲ್ಲೂ ಡಿಜಿಟಲ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯ ಸಿನಿ ಪ್ರಿಯರನ್ನು ಆಹ್ವಾನಿಸಿದೆ. ಎರಡೂ ಓಟಿಟಿ ವೇದಿಕೆಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಆದಿಪುರುಷ್ ರಿಲಿಸ್ ಕುರಿತು ಮಾಹಿತಿ ಹಂಚಿಕೊಂಡಿದೆ. ಕನ್ನಡ, ತೆಲುಗು, ಮಲೆಯಾಳಂ, ತಮಿಳು ಭಾಷೆಯ ಆದಿಪುರುಷ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದ್ದರೆ, ನೆಟ್ಫ್ಲಿಕ್ಸ್ನಲ್ಲಿ ಹಿಂದಿ ಆವೃತ್ತಿ ಲಭ್ಯವಿದೆ.
500 ಕೋಟಿ ರೂ.ಗೂ ಹೆಚ್ಚು ಬಂಡವಾಳದಲ್ಲಿ ನಿರ್ಮಾಣವಾದ ಆದಿಪುರುಷ್ ಸಿನಿಮಾ ಈವರೆಗೆ ತಯಾರಾದ ಅತ್ಯಂತ ದುಬಾರಿ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಓಂ ರಾವುತ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಗ್ರಾಫಿಕ್ಸ್, ಡೈಲಾಗ್ಸ್, ಕಥೆ ರವಾನಿಸಿದ ರೀತಿ, ಪಾತ್ರಗಳ ಚಿತ್ರಣ ಸೇರಿದಂತೆ ಕೆಲ ವಿಷಯಗಳ ಹಿನ್ನೆಲೆಯಲ್ಲಿ ಪ್ರೇಕ್ಷಕರು, ವಿಮರ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿತು. ಹನುಮಾನ್ ಡೈಲಾಗ್ಗಳು ಹೆಚ್ಚಿನ ಟೀಕೆಗೆ ಒಳಗಾಗಿತ್ತು.
ಮಹಾಕಾವ್ಯ ರಾಮಾಯಣ ಆಧಾರಿತ ಸಿನಿಮಾ ಇದಾಗಿದ್ದು, ಕೆಲ ಡೈಲಾಗ್ಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ವಿರುದ್ಧ ಪ್ರೇಕ್ಷಕರು ಕಿಡಿಕಾರಿದ್ದರು. ಬಳಿಕ ಡೈಲಾಗ್ ರೈಟರ್ ಜನತೆಯಲ್ಲಿ ಕ್ಷಮೆಯಾಚಿಸಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ನಿರ್ದೇಶಕ ನಟಿಯ ಚುಂಬನ ವಿಚಾರವೂ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಮೊದಲೆರಡು ದಿನ ಅದ್ಭುತ ಪ್ರದರ್ಶನ ಕಂಡ ಸಿನಿಮಾ, ನೆಗೆಟಿವ್ ಟಾಕ್ ಸ್ಪ್ರೆಡ್ ಆದ ಬೆನ್ನಲ್ಲೇ ಬಾಕ್ಸ್ ಆಫೀಸ್ನಲ್ಲಿ ಕುಸಿತ ಕಂಡಿತು.
ಇದನ್ನೂ ಓದಿ: ಪದ್ಮಾವತಿ ಬಳಿಕ ಭೀಮ; ದುನಿಯಾ ವಿಜಯ್ ಸಿನಿಮಾ ಹಾಡಿಗೆ ಕವಿರಾಜ್ ಸಾಹಿತ್ಯ
ಆದಿಪುರುಷ್ ಸಿನಿಮಾದಲ್ಲಿ ಆದಿಪುರುಷ ಶ್ರೀರಾಮನಾಗಿ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ ಪ್ರಭಾಸ್, ಜಾನಕಿ ಪಾತ್ರದಲ್ಲಿ ಕೃತಿ ಸನೋನ್, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಲಂಕೇಶ್ ರಾವಣನ ಪಾತ್ರದಲ್ಲಿ ಸೈಫ್ ಅಲಿಖಾನ್, ಹನುಮಾನ್ ಪಾತ್ರದಲ್ಲಿ ದೇವತ್ತ ನಟಿಸಿದ್ದಾರೆ.