ಕೇದಾರನಾಥ (ಉತ್ತರಾಖಂಡ): ಹಿಂದೂಗಳ ಪವಿತ್ರ ಯಾತ್ರೆಯಲ್ಲಿ ಒಂದಾದ ಚಾರ್ ಧಾಮ್ ಯಾತ್ರೆ ಅಂತಿಮ ಹಂತದಲ್ಲಿದೆ. ನವೆಂಬರ್ 15 ರಂದು ಕೇದಾರನಾಥ ಧಾಮದ ಬಾಗಿಲು ಮುಚ್ಚಲಿದ್ದರೆ, ನವೆಂಬರ್ 18 ರಂದು ಬದರಿನಾಥ ದೇವಾಲಯದ ಬಾಗಿಲು ಬಂದ್ ಆಗಲಿದೆ . ಈ ಹಿನ್ನೆಲೆ ರಾಜಕೀಯ ನಾಯಕರು, ಸಿನಿಮಾ ತಾರೆಯರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಬಿಜೆಪಿ ಸಂಸದ ವರುಣ್ ಗಾಂಧಿ ಬದರಿನಾಥ್ ಧಾಮಕ್ಕೆ ಆಗಮಿಸಿ ಬದ್ರಿವಿಶಾಲ್ ದರ್ಶನ ಪಡೆದರು. ಇನ್ನು ಖ್ಯಾತ ನಟಿ ರವೀನಾ ಟಂಡನ್ ಕೇದರಾನಾಥ ದೇವಾಲಯಕ್ಕೆ ಭೇಟಿ ನೀಡಿ ಬಾಬಾ ಕೇದಾರರ ಆಶೀರ್ವಾದ ಪಡೆದು ಪುನೀತರಾದರು.
ಬದರಿನಾಥ ತಲುಪಿದ ವರುಣ್ ಗಾಂಧಿ: ಸಾಮಾನ್ಯ ಭಕ್ತರಲ್ಲದೇ, ಕೇದರಿನಾಥ ಮತ್ತು ಬದರಿನಾಥ ಧಾಮಗಳಿಗೆ ರಾಜಕಾರಣಿಗಳು ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇದರಾನಾಥ ಧಾಮದಲ್ಲಿ ಮೂರು ದಿನಗಳ ಕಾಲ ಪೂಜೆ ಮುಗಿಸಿ ದೆಹಲಿಗೆ ಮರಳಿದ್ದರು. ಇದಕ್ಕೂ ಮುನ್ನ, ಎಸ್ಪಿ ಸಂಸದ ಡಿಂಪಲ್ ಯಾದವ್ ಕೇದರಿನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಿದ್ದರು. ಇಂದು ಬಿಜೆಪಿ ಸಂಸದ ವರುಣ್ ಗಾಂಧಿ ಬದರಿನಾಥ್ ತಲುಪಿದ್ದಾರೆ. ಕುಟುಂಬ ಸಮೇತರಾಗಿ ಬಂದು ಬದ್ರಿವಿಶಾಲ್ ದರ್ಶನ ಪಡೆದರು.
ಮಗಳೊಂದಿಗೆ ಕೇದಾರನಾಥಕ್ಕೆ ರವೀನಾ ಭೇಟಿ: ಭಾರತೀಯ ಚಿತ್ರರಂಗದ ಹೆಸರಾಂತ ನಟಿ ರವೀನಾ ಟಂಡನ್ ತಮ್ಮ ಮಗಳು ರಾಶಾ ಟಂಡನ್ ಜೊತೆ ಇಂದು ಕೇದಾರನಾಥಕ್ಕೆ ಭೇಟಿ ನೀಡಿದರು. ಇವರನ್ನು ಬದರಿನಾಥ- ಕೇದಾರನಾಥ ದೇವಾಲಯ ಸಮಿತಿ (BKTC) ಉಪಾಧ್ಯಕ್ಷ ಕಿಶೋರ್ ಉಪಾಧ್ಯಾಯ ಸ್ವಾಗತಿಸಿ, ಪ್ರಸಾದ ನೀಡಿದರು. ರವೀನಾ ಮಗಳೊಂದಿಗೆ ಸೇರಿ ಕೇದಾರನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಹಿಮಪಾತದ ನಡುವೆಯೇ ತೆರೆದ ಕೇದಾರನಾಥನ ಮಹಾದ್ವಾರ: ಉತ್ತರಾಖಂಡ ಸಿಎಂ ಭಾಗಿ
ಮಾಹಿತಿಯ ಪ್ರಕಾರ, ರವೀನಾ ಟಂಡನ್ ಮತ್ತು ರಾಶಾ ಟಂಡನ್ ನವೆಂಬರ್ 6 ರಂದು ಡೆಹ್ರಾಡೂನ್ ತಲುಪಿದ್ದರು. ನವೆಂಬರ್ 7ರ ಬೆಳಗ್ಗೆ ಡೆಹ್ರಾಡೂನ್ನಿಂದ ಕೇದಾರನಾಥ ದೇವಾಲಯಕ್ಕೆ BKTC ಅಧ್ಯಕ್ಷ ಅಜೇಂದ್ರ ಅಜಯ್ ಅವರೊಂದಿಗೆ ಬಂದಿದ್ದರು. ಅದೇ ಸಮಯದಲ್ಲಿ, ಖ್ಯಾತ ನಟಿಯನ್ನು ನೋಡಲು ಅಭಿಮಾನಿಗಳ ದಂಡು ನೆರೆದಿತ್ತು. ರವೀನಾ ಟಂಡನ್ ಕೇದಾರನಾಥನ ದರ್ಶನ ಪಡೆದು ಹೊರಬರುತ್ತಿದ್ದಂತೆ, ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ರವೀನಾ ಇದಕ್ಕೆ ನಿರಾಕರಿಸದೇ, ಫ್ಯಾನ್ಸ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
BKTC ಪ್ರಕಾರ, ರವೀನಾ ಟಂಡನ್ ಅವರು ಇಂದು ಮಧ್ಯಾಹ್ನ ಬದರಿನಾಥ ಧಾಮ ತಲುಪಿದರು. ಅಲ್ಲಿ ಬದ್ರಿವಿಶಾಲ್ ದರ್ಶನ ಪಡೆದರು. ಮಧ್ಯಾಹ್ನ ದೇಶದ ಗಡಿ ಗ್ರಾಮ ಮಾನಾಗೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದಾದ ನಂತರ ಸರಸ್ವತಿ ನದಿ, ಭೀಮಕುಂಡ, ಗಣೇಶ ಗುಹೆ, ವ್ಯಾಸ ಗುಹೆಗೂ ಭೇಟಿ ನೀಡಿದ್ದಾರೆ. ಸಂಜೆ ಮಾನದಿಂದ ಬದರಿನಾಥ ಬಂದು ಭಗವಾನ್ ಬದ್ರಿವಿಶಾಲ್ ಶಯನ ಆರತಿಯಲ್ಲಿ ಪಾಲ್ಗೊಳ್ಳುವರು. ಬುಧವಾರ ಬೆಳಗ್ಗೆ ಬದ್ರಿವಿಶಾಲ ದೇವರ ವೇದಪಾಠ ಪೂಜೆಯಲ್ಲಿ ಪಾಲ್ಗೊಂಡು ಮುಂಬೈಗೆ ತೆರಳಲಿದ್ದಾರೆ.
ಇದನ್ನೂ ಓದಿ: International Yoga Day: ಕೇದಾರನಾಥ ಧಾಮದಲ್ಲಿ ಸಿಬ್ಬಂದಿ, ಯಾತ್ರಿಕರಿಂದ ಯೋಗಾಭ್ಯಾಸ