ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ ಮುಂಬರುವ ಚಿತ್ರ "ವೇದತ್ ಮರಾಠೆ ವೀರ್ ದೌಡ್ಲೆ ಸಾತ್" (Vedat Marathe Veer Daudle Saat)ದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ನಟಿಸುವುದಾಗಿ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ತಿಳಿಸಿದ್ದಾರೆ. ಮರಾಠ ರಾಜನ ಪಾತ್ರವನ್ನು ನಿರ್ವಹಿಸುವುದು ಬಹಳ ದೊಡ್ಡ ಕೆಲಸ, ನಾನು ಅತ್ಯುತ್ತಮ ಅಭಿನಯವನ್ನು ನೀಡಲು ಪ್ರಯತ್ನಿಸುತ್ತೇನೆಂದು ಅಕ್ಷಯ್ ತಿಳಿಸಿದ್ದಾರೆ.
ಮುಂಬೈನಲ್ಲಿ ವೇದತ್ ಮರಾಠೆ ವೀರ್ ದೌಡ್ಲೆ ಸಾತ್ ಸಿನಿಮಾ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ರಾಜ್ ಠಾಕ್ರೆ ಅವರ ಕಾರಣದಿಂದ ನನಗೆ ಈ ಪಾತ್ರ ಸಿಕ್ಕಿತು. ಅವರು ನನಗ ಈ ಪಾತ್ರವನ್ನು ನೀವು ಮಾಡಬೇಕು ಎಂದು ಹೇಳಿದರು. ಒಮ್ಮೆ ನಾನು ಆಶ್ಚರ್ಯಚಕಿತನಾದೆ. ಶಿವಾಜಿ ಮಹಾರಾಜನಾಗಿ ನಟಿಸುವುದು ನನಗೆ ದೊಡ್ಡ ಕೆಲಸ. ನಾನು ಪಾತ್ರಕ್ಕೆ ಜೀವ ತುಂಬಲು ಸಂಪೂರ್ಣ ಪ್ರಯತ್ನ ಮಾಡುವೆ ಎಂದು ಹೇಳಲು ಬಯಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಉಪಸ್ಥಿತರಿದ್ದರು.
ಈ ಪಾತ್ರಕ್ಕೆ ಅಕ್ಷಯ್ ಕುಮಾರ್ ಸೂಕ್ತ ಆಯ್ಕೆ ಎಂದು ಹಿರಿಯ ನಟ, ನಿರ್ಮಾಪಕ ಮತ್ತು ಈ ಚಿತ್ರದ ನಿರ್ದೇಶಕ ಮಹೇಶ್ ಮಂಜ್ರೇಕರ್ ಹೇಳಿದ್ದಾರೆ. ಅಕ್ಷಯ್ ಅವರೊಂದಿಗೆ ಕೆಲಸ ಮಾಡುವುದು ನನ್ನ ಮೊದಲಿನ ಆಸೆಯಾಗಿತ್ತು. ಅಲ್ಲದೇ ಈ ಪಾತ್ರಕ್ಕೆ ನಾನು ಅವರನ್ನು ಹೊರತುಪಡಿಸಿ ಬೇರೆ ಯಾವುದೇ ನಟನನ್ನು ನೋಡಲು ಸಾಧ್ಯವಾಗಲಿಲ್ಲ. ಅಕ್ಷಯ್ ಓರ್ವ ಹಿಂದೂ ರಾಜನಾಗಿ ನಟಿಸಲು ಸೂಕ್ತ ಎಂದು ತಿಳಿಸಿದರು.
ಇದನ್ನೂ ಓದಿ: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ನಟಿ ರಮ್ಯಾ ಸಾಥ್
ಛತ್ರಪತಿ ಶಿವಾಜಿ ಮಹಾರಾಜರಂತೆ ಕಾಣುವ ಅಕ್ಷಯ್ ಕುಮಾರ್ ಅವರ ಮೊದಲ ನೋಟವನ್ನು ಚಿತ್ರತಂಡ ಹಂಚಿಕೊಂಡಿದೆ. ವಸೀಮ್ ಖುರೇಷಿ ನಿರ್ಮಾಣದ ಈ ಚಿತ್ರ ಮರಾಠಿ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2023ರ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.