ವಿದೇಶ ಪ್ರವಾಸಕ್ಕೆ ತೆರಳಿದ್ದ ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ (38) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಪಂದನಾ ಅವರು ಕುಟುಂಬಸ್ಥರು ಮತ್ತು ಸ್ನೇಹಿತೆಯರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು.
ವಿಜಯ ರಾಘವೇಂದ್ರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ಸ್ಪಂದನಾ ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಮಾತನಾಡಿದ ವಿಜಯ ರಾಘವೇಂದ್ರ ಸಹೋದರ ಶ್ರೀಮುರಳಿ, 'ಸಂಬಂಧಿಕರ ಜೊತೆ ಅತ್ತಿಗೆ ಬ್ಯಾಂಕಾಕ್ಗೆ ಹೋಗಿದ್ದರು. ಅಣ್ಣ ಹೇಳಿರುವ ಪ್ರಕಾರ ಮಲಗಿದ್ದ ವೇಳೆ ಸ್ಪಂದನಾಗೆ ಲೋ ಬಿಪಿ ಆಗಿದ್ದು, ನಿಧನರಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಸಂಬಂಧಿಕರ ಜೊತೆ ಸ್ಪಂದನಾ ಬ್ಯಾಂಕಾಕ್ಗೆ ತೆರಳಿದ್ದರು. ವಿಜಯ ರಾಘವೇಂದ್ರ ಅವರಿಗೆ ಅಲ್ಲೇ ಶೂಟಿಂಗ್ ಇತ್ತು. ಶೂಟಿಂಗ್ ಮುಗಿಸಿದ ನಂತರ ವಿಜಯ್ ಅವರು ಪತ್ನಿ ಸ್ಪಂದನಾ ಅವರನ್ನು ಸೇರಿಕೊಂಡಿದ್ದಾರೆ. ಬಳಿಕ ರಾತ್ರಿ ವೇಳೆ ಈ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಆ ಬಳಿಕ ಪೂರ್ಣ ಮಾಹಿತಿ ಗೊತ್ತಾಗಲಿದೆ. ಈ ಬಗ್ಗೆ ಊಹಾಪೋಹಗಳನ್ನು ಹಬ್ಬಿಸಬೇಡಿ. ನಾಳೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದೇವೆ ಎಂದು ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.
ಸ್ಪಂದನಾ ಅವರನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇನೆ. ವಿಜಯ್ ರಾಘವೇಂದ್ರ ನಮ್ಮೂರಲ್ಲಿ ಹುಟ್ಟಿ ಬೆಳೆದ ಮಗ. ಸ್ಪಂದನಾ ತಂದೆ ಬಿ ಕೆ ಶಿವರಾಮ್ ದಕ್ಷ ಅಧಿಕಾರಿ, ವಾರಕ್ಕೆ ಎರಡು ಬಾರಿ ಅವರ ಮನೆಗೆ ಬರುತ್ತಿದ್ದೆ. ನಮ್ಮ ಕಣ್ಮುಂದೆ ಬೆಳೆದ ಹುಡುಗ ವಿಜಯ್ ಈಗ ಪತ್ನಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾನೆ. ಈ ನೋವನ್ನು 29 ವರ್ಷಗಳ ಹಿಂದೆ ನನಗೂ ಆಗಿತ್ತು ಎಂದು ರಾಜ್ ಕುಟುಂಬದ ಆಪ್ತ ಮತ್ತು ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ ರಾ ಗೋವಿಂದ್ ಕಂಬಿನಿ ಮಿಡಿದಿದ್ದಾರೆ.
ಇದೀಗ ವಿಜಯ ರಾಘವೇಂದ್ರ ಮತ್ತು ಅವರ ತಂದೆ ಚಿನ್ನೇಗೌಡ, ಸಹೋದರ ಶ್ರೀಮುರಳಿ ಹಾಗೂ ಸ್ಪಂದನಾ ತಂದೆ ಶಿವರಾಮ್ ಬ್ಯಾಂಕಾಕ್ಗೆ ತೆರಳಲಿದ್ದಾರೆ. ಸ್ಪಂದನಾ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಅವರ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಮ ಅವರ ನಿವಾಸಕ್ಕೆ ಹಲವು ನಿವೃತ್ತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಟೈಗರ್ ಅಶೋಕ್ ಕುಮಾರ್, ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿದ್ದರು.
ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಅವರು ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಗಳಲ್ಲೊಬ್ಬರಾಗಿದ್ದರು. ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಅವರ ಮಗಳಾಗಿದ್ದರು. ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಇಬ್ಬರೂ ಪರಸ್ಪರ ಪ್ರೀತಿಸಿ 2007ರಲ್ಲಿ ದೊಡ್ಡವರ ಒಪ್ಪಿಗೆಯೊಂದಿಗೆ ಮದುವೆ ಆಗಿದ್ದರು. ಸ್ಪಂದನಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಅಪೂರ್ವ' ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದರು.
ಇದನ್ನೂ ಓದಿ: ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಇನ್ನಿಲ್ಲ - ಟ್ವಿಟರ್ನಲ್ಲಿ ಸಂತಾಪ!