'ವೇದ' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಎ ಹರ್ಷ ಕಾಂಬಿನೇಷನ್ನಲ್ಲಿ ಮೂಡಿಬಂದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಕಳೆದ ಶುಕ್ರವಾರ ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ತೆರೆ ಕಂಡು ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೊಸ ಅವತಾರದಲ್ಲಿ ಶಿವಣ್ಣನನ್ನು ಬೆಳ್ಳಿ ತೆರೆಮೇಲೆ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಮೂರು ಭಾಷೆಗಳಲ್ಲಿ ಬಿಡುಗಡೆ ಆಗಿರುವ ವೇದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಗಾಂಧಿನಗರದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಮೂರು ದಿನಗಳಲ್ಲಿ ವೇದ ಭರ್ಜರಿ ಕಲೆಕ್ಷನ್: ಹೌದು, ಕರ್ನಾಟಕದಲ್ಲೇ 350ಕ್ಕೂ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿರುವ ಸಿನಿಮಾ ವರ್ಷದ ಕೊನೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ಘೋಷಿಸದೇ ಇದ್ದರೂ, ಈ ಸಿನಿಮಾದ ವಿತರಕರಾದ ಮಂಜುನಾಥ್ ಮೂರು ದಿನದ ಕಲೆಕ್ಷನ್ ಬಗ್ಗೆ ಡೀಟೆಲ್ಸ್ ನೀಡಿದ್ದಾರೆ.
ಮೊದಲ ದಿನ 5.80 ಕೋಟಿ ರೂಪಾಯಿ ಸಂಗ್ರಹಿಸಿದೆ. ಎರಡನೇ ದಿನ 6.40 ಕೋಟಿ, ಮೂರನೇ ದಿನ 7.60 ಕೋಟಿ ರೂಪಾಯಿ ಸೇರಿ ಒಟ್ಟು 19 ಕೋಟಿ 80 ಲಕ್ಷ ರೂಪಾಯಿಯನ್ನು ಸಿನಿಮಾ ಬಾಚಿಕೊಂಡಿದೆ. ಈ ವಾರ ಇಯರ್ ಎಂಡ್ ಇರುವುದರಿಂದ ಅದು ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ. ವೀಕೆಂಡ್‌ನಲ್ಲಿ ವೇದ ಒಟ್ಟಾರೆ 25 ರಿಂದ 30 ಕೋಟಿ ರೂ ಕೊಳ್ಳೆ ಹೊಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವೇದ ವಿಮರ್ಶೆ: ವೇದ ಚಿತ್ರ ವೀಕ್ಷಿಸಿದ ಕನ್ನಡ ಸಿನಿಮಾಪ್ರಿಯರು ಶಿವಣ್ಣನ ಕಣ್ಣಿನ ನೋಟಕ್ಕೆ ಫಿದಾ ಆಗಿದ್ದು, ಹೆಣ್ಣು ಮಕ್ಕಳ ಬಗೆಗಿನ ಸಂದೇಶಕ್ಕೆ ಬೋಲ್ಡ್ ಆಗಿದ್ದಾರೆ. ಸ್ಟಾರ್ ನಟರು ಅದೇ ಹಳೇ ಮಸಾಲಾ ಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿ ಈ ರೀತಿಯ ಪ್ರಯತ್ನಗಳಿಗೆ ಕೈ ಹಾಕಬೇಕು ಅನ್ನೋದು ಪ್ರೇಕ್ಷಕರ ಅಂಬೋಣ.
ವೇದ ಕಥೆ ಏನು?: ಮಹಿಳೆಯರ ಮೇಲಿನ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆಯೇ 'ವೇದ'. ಈಗಾಗಲೇ ಈ ರೀತಿಯ ಕಥಾಹಂದರವಿರುವ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ನಿರ್ದೇಶಕ ಎ ಹರ್ಷ ಈ ಕಥೆಯನ್ನು 1960 ಹಾಗು 1980ರ ಕಾಲಘಟ್ಟಕ್ಕೆ ತಕ್ಕಂತೆ ಹೆಣೆದಿರೋದು ವಿಶೇಷವಾಗಿದೆ. ಮಹಿಳೆಯರು ಅನ್ಯಾಯ ಆದ ಕ್ಷಣವೇ ಅದರ ವಿರುದ್ಧ ಸಿಡಿದೇಳಬೇಕು ಎಂಬುದೇ ವೇದ ಸಮಾಜಕ್ಕೆ ಕೊಡುವ ಸಂದೇಶ.
ಶಿವಣ್ಣನ 125ನೇ ಚಿತ್ರ: ವೇದ ನಟ ಶಿವರಾಜ್ ಕುಮಾರ್ ಅವರ 125ನೇ ಚಿತ್ರ. ಈ ಕಾರಣಕ್ಕಾಗಿಯೇ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಥಿಯೇಟರ್‌ಗಳಿಗೆ ಬಂದ ಅಭಿಮಾನಿಗಳಿಗೆ ಸಿನಿಮಾ ನಿರಾಸೆ ಮಾಡಿಲ್ಲ. 'ವೇದ'ನಾಗಿ ಶಿವರಾಜ್ ಕುಮಾರ್ ಅಬ್ಬರಿಸಿದರೆ, ಶಿವಣ್ಣನ ಮಗಳಾಗಿ ಅದಿತಿ ಸಾಗರ್ ಮೈನವಿರೇಳಿಸುವಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ವೇದ ಚಿತ್ರತಂಡ ಹೀಗಿದೆ..: ನಟಿ ಗಾನವಿ ಲಕ್ಷ್ಮಣ್, ಶ್ವೇತಾ ಚಂಗಪ್ಪ, ಉಮಾಶ್ರೀ, ವೀಣಾ ಪೊನ್ನಪ್ಪ ನಟನೆ ಬಗ್ಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲಾ ವಿಭಾಗಗಳಲ್ಲೂ ಅಚ್ಚುಕಟ್ಟಾಗಿ ತಯಾರಾಗಿರುವ ವೇದ ಕಲೆಕ್ಷನ್ ವಿಚಾರದಲ್ಲೂ ಸಹ ಸದ್ದು ಮಾಡುತ್ತಿದೆ. ಚಿತ್ರ ವೀಕ್ಷಿಸಿದ ಜನರು ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ದು ನಿನ್ನೆಯಿಂದ ಆಡಿಯನ್ಸ್ ತಮ್ಮ ಫ್ಯಾಮಿಲಿ ಸಮೇತ ಬರುತ್ತಿದ್ದಾರೆ ಅನ್ನೋದು ಚಿತ್ರ ಮಂದಿರಗಳ ಮಾಲೀಕರ ಮಾತು.
ಇದನ್ನೂ ಓದಿ: ಸ್ತ್ರೀ ಕುಲಕ್ಕೆ ಧೈರ್ಯ ತುಂಬಿದ ಶಿವಣ್ಣನ 'ವೇದ' ಸಿನಿಮಾ
ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿಯೂ ಸಿನಿ ರಸಿಕರಿಂದ ವೇದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವೇದ ನೋಡಿದ ತಮಿಳು ಪ್ರೇಕ್ಷಕರು ಕಾಂತಾರ ಹಾಗೂ ಕೆಜಿಎಫ್ ಸಿನಿಮಾಗೆ ಹೋಲಿಸಿ ಮಾತನಾಡುತ್ತಿದ್ದಾರೆ. ಗೀತಾ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ವೇದ ಸಕ್ಸಸ್ ಕಂಡ ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.
ಇದನ್ನೂ ಓದಿ: ಮಾಸ್ಕ್ ಧರಿಸಿದರೆ ಒಳ್ಳೆಯದು: ನಟ ಶಿವರಾಜ್ ಕುಮಾರ್