ಮಂಗಳೂರು: ಕಾಂತಾರ ಸಿನಿಮಾ ಅನ್ನು ಇತರ ಭಾಷೆಗಳಿಗೆ ಡಬ್ ಮಾಡುವ ಬಗ್ಗೆ ಬೇಡಿಕೆಗಳು ಬರುತ್ತಿದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಚಿತ್ರತಂಡ ನಿರ್ಧಾರ ಮಾಡಿ ಘೋಷಿಸಲಿದೆ ಎಂದು ಕಾಂತಾರ ಸಿನಿಮಾ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಸಿನಿಮಾ ನಿರ್ಮಿಸುವ ಮೊದಲೇ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಆದರೆ ಮೊದಲು ಕನ್ನಡದಲ್ಲೇ ಈ ಸಿನಿಮಾವನ್ನು ಮಾಡಬೇಕೆಂಬ ಒತ್ತಾಸೆಯಿಂದ ಕನ್ನಡದಲ್ಲಿ ನಿರ್ಮಾಣ ಮಾಡಲಾಗಿದೆ. ಇದೀಗ ಸಿನಿಮಾದ ಬಗ್ಗೆ ಎಲ್ಲೆಡೆ ಜನರು ಮಾತನಾಡತೊಡಗಿದ್ದು, ಬೇರೆ ಭಾಷೆಗಳಿಗೂ ಡಬ್ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದೆ. ಎರಡು ದಿನಗಳಲ್ಲಿ ಕಾಂತಾರ ಸಿನಿಮಾವನ್ನು ಇತರ ಭಾಷೆಗಳಿಗೂ ಡಬ್ ಮಾಡುವ ಬಗ್ಗೆ ಘೋಷಿಸಲಾಗುತ್ತದೆ ಎಂದರು.
ಕಾಂತಾರ ಸಿನಿಮಾ ಎರಡನೇ ಭಾಗ ಮಾಡುವ ಬಗ್ಗೆ ಇನ್ನೂ ಚಿಂತಿಸಿಲ್ಲ. ಆದರೆ ಕಾಂತಾರ 2 ಬರಲೂಬಹುದು ಎಂದು ಹೇಳಿದರು. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ನಾವು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಿದ್ದೇವೆ. ಆ ದೈವವೇ ನಮ್ಮಿಂದ ಈ ಸಿನಿಮಾ ಮಾಡಿಸಿದೆ. ದೈವಾವೇಶದಲ್ಲಿ ನನ್ನ ಪಾತ್ರ ಬೊಬ್ಬೆಯಿಡುವ ಒಂದು ದೃಶ್ಯವಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ದೈವಾರಾಧನೆ ಒಂದು ನಂಬಿಕೆಯ ಸಂಗತಿ. ದಯವಿಟ್ಟು ಯಾರೂ ದೈವದಂತೆ ಕೂಗು ಹಾಕೋದನ್ನು ಅನುಕರಣೆ ಮಾಡಬಾರದೆಂದು ಮನವಿ ಮಾಡಿದರು.
ಈ ಸಿನಿಮಾದಲ್ಲಿ ದೈವ ನರ್ತಕನ ಪಾತ್ರ ಮಾಡಿದ ದೈವ ನರ್ತಕ ಮುಖೇಶ್ ಅವರು ಮಾತನಾಡಿ, ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಇಡೀ ತಂಡವು ಶ್ರದ್ಧೆ ಭಕ್ತಿಯಿಂದ ಮಾಡಿದೆ. ಮದ್ಯ, ಮಾಂಸವನ್ನು ತ್ಯಜಿಸಿ ಈ ಸಿನಿಮಾವನ್ನು ಮಾಡಲಾಗಿದೆ ಎಂದರು.
ಇದನ್ನೂ ಓದಿ: ಕಾಂತಾರ ಸಿನಿಮಾ ವೀಕ್ಷಿಸಿದ ಪ್ರಭಾಸ್: ರಿಷಬ್ ಶೆಟ್ಟಿಗೆ ಬಾಹುಬಲಿ ವಿಶ್
ಕಾಂತಾರ ಸಿನಿಮಾ ನಾಯಕಿ ಸಪ್ತಮಿ ಗೌಡ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ಈ ಸಿನಿಮಾಕ್ಕಾಗಿ ನಾನು ಮಂಗಳೂರು ಕನ್ನಡ ಭಾಷೆಯನ್ನು ಕಲಿತುಕೊಂಡಿದ್ದೆ. ಈ ಸಿನಿಮಾ ಬಂದ ಬಳಿಕ ಪ್ರೇಕ್ಷಕರು ನಾನು ಮಂಗಳೂರು ಹುಡುಗಿ ಅಂತಲೇ ನಂಬಿದ್ದಾರೆ. ಅಷ್ಟು ಚೆನ್ನಾಗಿ ಪಾತ್ರ ಬಂದಿದೆ ಎಂದು ಹೇಳಿದರು.